ಉದಯರಶ್ಮಿ ದಿನಪತ್ರಿಕೆ
ವಿಜಯಪುರ ನಗರದ ರಹಿಂನಗರದಲ್ಲಿ ಶ್ರೀಮತಿ ರಾಜೇಶ್ವರಿ ಮಲ್ಲಪ್ಪ ಬರಟಗಿ ಅವರ ಖಾಲಿ ಜಾಗೆಯಲ್ಲಿದ್ದ ಶೆಡ್‌ನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಂದ ವಾಣಿಜ್ಯ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಗ್ಯಾಸ್ ತುಂಬಿಸಿ ಹೋಟೆಲ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದರು.
ದಾಳಿಯ ವೇಳೆ ಸುಮಾರು 10 ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು 13 ಗೃಹಬಳಕೆಯ ಸಿಲಿಂಡರ್‌ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಎಲ್‌ಪಿಜಿ (ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಆದೇಶ-2000 ಹಾಗೂ ಅಗತ್ಯ ವಸ್ತುಗಳ ಕಾಯ್ದೆ-1955ರ ಸೆಕ್ಷನ್ 3/7ರ ಅಡಿಯಲ್ಲಿ ಗಾಂಧೀಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಹಾರ ನಿರೀಕ್ಷಕ ಶಂಕರಗೌಡ ಬಿ. ಬಿರಾದಾರ ಅವರು ದೂರು ದಾಖಲಿಸಿದ್ದು, ಗೃಹಬಳಕೆಯ ಸಿಲಿಂಡರ್‌ಗಳ ಗ್ಯಾಸ್ ಅನ್ನು ವಾಹನಗಳಿಗೆ ಅಥವಾ ವಾಣಿಜ್ಯ ಸಿಲಿಂಡರ್‌ಗಳಿಗೆ ಅಕ್ರಮವಾಗಿ ತುಂಬಿಸಿ ಮಾರಾಟ ಮಾಡುವುದು ಕಾನೂನುಬಾಹಿರ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಹೋಟೆಲ್ ಮಾಲೀಕರು ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದ ವಾಣಿಜ್ಯ ಎಲ್‌ಪಿಜಿ ವಿತರಕರಿಂದ ಕಸ್ಟಮರ್ ಐಡಿ ಪಡೆದು ವಾಣಿಜ್ಯ ಸಿಲಿಂಡರ್‌ಗಳನ್ನು ಬಳಸುವಂತೆ ಸೂಚಿಸಲಾಗಿದೆ. ಅನಧಿಕೃತ ಎಲ್‌ಪಿಜಿ ಬಳಕೆ ಕಂಡುಬಂದರೆ ಸಂಬಂಧಿಸಿದ ಹೋಟೆಲ್ ಮಾಲೀಕರ ವಿರುದ್ಧವೂ ಅಗತ್ಯ ವಸ್ತುಗಳ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

