ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಹೃದಯಸ್ಪರ್ಶಿ ಘಟನೆಯೊಂದು ಮಂಗಳವಾರ ನಡೆಯಿತು.
ಗೊರನಾಳ ಗ್ರಾಮದ 75 ವರ್ಷದ ಹಿರಿಯ ನಾಗರಿಕರೊಬ್ಬರು ತಮ್ಮ ಮಗಳು ಮತ್ತು ಮೊಮ್ಮಗನೊಂದಿಗೆ ಬಿ.ಎಲ್.ಡಿ.ಇ ಆಸ್ಪತ್ರೆಗೆ ಬಂದು ನನ್ನದೊಂದು ಅಳಿಲು ಕಾಣಿಕೆ ಸ್ವೀಕರಿಸಿ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಆರ್. ಬೆಂತೂರು ಮತ್ತು ಎಲುವು ಮತ್ತು ಕೀಲು ತಜ್ಞ ಡಾ.ಗಿರೀಶ ಖೋದ್ನಾಪುರ ಅವರನ್ನು ಕೇಳಿಕೊಂಡರು. ಆಗ ಒಂದು ಕ್ಷಣ ವೈದ್ಯರು, ಇದೆಲ್ಲ ಏಕೆ ಎಂದು ಪ್ರಶ್ನಿಸಿದರು. ಆಗ 75 ವರ್ಷದ ನಬೀಸಾಬ ಪಿಂಜಾರ ತಾನು ಈಗ ಸಂಪೂರ್ಣ ಗುಣಮುಖನಾಗಿದ್ದು, ಊರುಗೊಲಿನ ಸಹಾಯವಿಲ್ಲದೆ ನಡೆಯುತ್ತಿದ್ದೇನೆ. ಈ ಸಂತಸವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಮಗಳು ಮತ್ತು ಮೊಮ್ಮಗನೊಂದಿಗೆ ಬಂದಿದ್ದೇನೆ ಎಂದು ಹೇಳಿ ತನ್ನ ಜೊತೆಗೆ ತಂದಿದ್ದ ಅಕ್ಕಿ ಮತ್ತು ಗೋದಿಯ ಮೂಟೆಯನ್ನು ಆಸ್ಪತ್ರೆಗೆ ನೀಡಿದರು.
ಪ್ರಕರಣದ ಹಿನ್ನೆಲೆ: ಗೊರನಾಳ ಗ್ರಾಮದ 75 ವರ್ಷದ ಹಿರಿಯ ವ್ಯಕ್ತಿ ನಬೀಸಾಬ ಪಿಂಜಾರ ಕಾಲು ಜಾರಿ ಬಿದ್ದ ಪರಿಣಾಮ ಅವರ ಎಡಚಪ್ಪೆಗೆ ಗಂಭೀರ ಗಾಯವಾಗಿತ್ತು. ನಡೆಯಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ವಾರಗಳ ಹಿಂದೆ ಡಾ. ಗಿರೀಶ ಖೋದ್ನಾಪುರ ಮತ್ತು ತಂಡದವರು ಅರವಳಿಗೆ ವೈದ್ಯರ ಜೊತೆ ಸೇರಿ ಬೈಪೋಲಾರ ಹೆಮಿಆರ್ಥೊಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿ ಎಡಚಪ್ಪೆಯ ಎಲುಬನ್ನು ಬದಲಾಯಿಸಿದ್ದರು. ಎ.ಬಿ.ಎ.ಆರ್.ಕೆ ಸ್ಕೀಂ ನಡಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆ ಮಾಡಿದ್ದರು. ನಂತರ ಗುಣಮುಖನಾದ ನಬೀಸಾಬ ಪಿಂಜಾರ ತಮ್ಮೂರಿಗೆ ತೆರಳಿದ್ದರು. ಕೆಲವು ದಿನಗಳ ನಂತರ ಊರುಗೋಲಿನ ಸಹಾಯವಿಲ್ಲದೆ ತಾವು ಮೊದಲಿನಂತೆಯೇ ಆರಾಮಾಗಿ ನಡೆಯಲಾರಂಭಿಸಿದರು. ತಾವು ಆಸ್ಪತ್ರೆಯಲ್ಲಿದ್ದಾಗ ಸಾಮಾನ್ಯ ವಾರ್ಡಿನ ರೋಗಿಗಳಿಗೆ ಬಿ.ಎಲ್.ಡಿ.ಇ ಆಸ್ಪತ್ರೆ ವತಿಯಿಂದ ಪ್ರತಿದಿನ ಉಚಿತವಾಗಿ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡುತ್ತಿರುವುದನ್ನು ಅವರು ಗಮನಿಸಿದ್ದರು. ಹೀಗಾಗಿ ತಮ್ಮದೂ ಅಳಿಲು ಸೇವೆ ಇರಲಿ ಎಂಬ ಸದುದ್ದೇಶದಿಂದ ತಮ್ಮ ಜೊತೆಗೆ ತಂದಿದ್ದ ಅಕ್ಕಿ ಮತ್ತು ಗೋದಿಯ ಮೂಟೆಯನ್ನು ಕಿರುಕಾಣಿಕೆಯ ರೂಪದಲ್ಲಿ ಆಸ್ಪತ್ರೆಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಬಿಸಾಬ ನದಾಫ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಗಾಬರಿಯಾಗಿದ್ದೆ. ಮುಪ್ಪಿನ ವಯಸ್ಸಿನಲ್ಲಿ ಯಾವುದೇ ಸಹಾಯವಿಲ್ಲದೇ ಮತ್ತೆ ನಡೆಯಲು ಸಾಧ್ಯವೇ ಎಂಬ ಆತಂಕವಿತ್ತು. ಆದರೆ, ಡಾ. ಗಿರೀಶ ಖೋದ್ನಾಪುರ ಧೈರ್ಯ ಹೇಳಿ ಯಶಸ್ಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈಗ ನಾನು ಮುಂಚೆಯಂತೆ ಸಾಮಾನ್ಯವಾಗಿ ನಡೆಯುತ್ತಿದ್ದೇನೆ. ಈ ಸಂತಸದ ಕ್ಷಣಗಳನ್ನು ವೈದ್ಯರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದಾಗ ನನ್ನ ಮಗಳು ಮತ್ತು ಮೊಮ್ಮಗ ತಾವೂ ಕೂಡ ವೈದ್ಯರಿಗೆ ಧನ್ಯವಾದ ತಿಳಿಸಲು ಆಗಮಿಸುವುದಾಗಿ ನನ್ನ ಜೊತೆ ಬಂದಿದ್ದಾರೆ. ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರ ಪ್ರೀತಿಯ ಮತ್ತು ಅಕ್ಕರೆಯ ಚಿಕಿತ್ಸೆ ಮತ್ತು ಆರೈಕೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂತೂರ ಮಾತನಾಡಿ, ಸಾಮಾನ್ಯವಾಗಿ ರೋಗಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಭೇಟಿಗೆ ಬರುತ್ತಾರೆ. ಆದರೆ, ನಬೀಸಾಬ ಪಿಂಜಾರ ಅವರು ಕೃತಜ್ಞತೆ ಸಲ್ಲಿಸಲು ಆಗಮಿಸಿರುವುದು ವೈದ್ಯರಾದ ನಮಗೆಲ್ಲರಿಗೂ ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದೆ. ನಮ್ಮಲ್ಲಿ ಎಲ್ಲ ಆರೋಗ್ಯ ಯೋಜನೆಗಳು ಲಭ್ಯವಿದ್ದು, ರೋಗಿಗಳಿಗೆ ವರದಾನವಾಗಿವೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸಕ ಡಾ.ಗಿರೀಶ ಖೋದ್ನಾಪುರ ಮಾತನಾಡಿ, ನಬೀಸಾಬ ಪಿಂಜಾರ ಅವರು ಬಂದು ಈ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿರುವುದನ್ನು ಕಂಡು ಮಾತುಗಳೇ ಬಾರದಾಗಿವೆ. ಪ್ರತಿಯೊಬ್ಬ ರೋಗಿಗೂ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂಬುದು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಕುಲಾಧಿಪತಿ ಬಿ. ಎಂ. ಪಾಟೀಲ ಅವರ ಆಶಯವಾಗಿದೆ. ಅದರಂತೆ ಆಸ್ಪತ್ರೆಯ ವೈದ್ಯರೆಲ್ಲರೂ ರೋಗಿಗಳ ಸೇವೆಯಲ್ಲಿ ತೊಡಗಿದ್ದೇವೆ. ಇಂಥ ಸಂತಸ ಭರಿತ ಕ್ಷಣಗಳು ನಮ್ಮನ್ನು ಮತ್ತಷ್ಟು ಉತ್ತಮ ಕಾರ್ಯ ಮಾಡಲು ಸ್ಪೂರ್ತಿ ನೀಡುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಏಕನಾಥ ಜಾಧವ ಉಪಸ್ಥಿತರಿದ್ದರು. ಅಲ್ಲದೇ, ರೋಗಿಗಳು ನೀಡಿದ ಅಕ್ಕಿ ಮತ್ತು ಗೋದಿಯನ್ನು ಆಸ್ಪತ್ರೆಯ ಆಹಾರ ವಿತರಣೆ ವಿಭಾಗಕ್ಕೆ ಕಳುಹಿಸಿದರು.

