ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತ ಮುಖಂಡ, ಜಿಪಂ ಮಾಜಿ ಸದಸ್ಯ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಅವರ ನಿಧನಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕಂಬನಿ ಮಿಡಿದಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸದಾ ರೈತರ ಪರವಾಗಿ ಚಿಂತಿಸುತ್ತಿದ್ದ ಉತ್ಸಾಹಿ ರೈತ ಮುಖಂಡರಾದ ಬಸವರಾಜ ಕುಂಬಾರ ಅವರು ನಿಧನರಾಗಿರುವುದು ಅತೀವ ದುಃಖ ತಂದಿದೆ. 2008ರಿಂದ 2013ರ ಅವಧಿಯಲ್ಲಿ ಕೆರೆಗಳನ್ನು ತುಂಬಿಸುವ ಹೋರಾಟಕ್ಕೆ ಬಸವರಾಜ ಕುಂಬಾರ ಅವರು ಸಕ್ರಿಯವಾಗಿ ಕೈಜೋಡಿಸಿದ್ದರು. ನಮ್ಮ BLDE ಸಂಸ್ಥೆಯ ವತಿಯಿಂದ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ರೂಪಿಸಿ, ಅದನ್ನು ಕಾರ್ಯಗತಗೊಳಿಸಲು ಕಾರ್ಯಕ್ರಮ ರೂಪಿಸಿದ ಸಂದರ್ಭದಲ್ಲಿ, ಬಸವರಾಜ ಕುಂಬಾರ ಅವರು ಸಂಚಾಲಕರಾಗಿ ಅವಳಿ ಜಿಲ್ಲೆಗಳಲ್ಲಿ ಸಂಘಟನೆ ಮಾಡಿ, ಹೋರಾಟಕ್ಕೆ ಬಲ ತುಂಬಿದ್ದರು. ಅವಳಿ ಜಿಲ್ಲೆಗಳಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಅವರ ಪಾತ್ರವೂ ಅಪಾರವಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 32 ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳಿದ್ದು, 30 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಒಬ್ಬರು ಪಕ್ಷೇತರರಾಗಿದ್ದರೆ, ಬಿಜೆಪಿಯಿಂದ ಆಯ್ಕೆಯಾಗಿದ್ದ ಏಕೈಕ ಸದಸ್ಯ ಬಸವರಾಜ ಕುಂಬಾರ ಅವರಾಗಿದ್ದರು. ಒಬ್ಬಂಟಿಯಾಗಿಯೇ ಜಿಲ್ಲಾ ಪಂಚಾಯತ್‌ನಲ್ಲಿ ವಿಪಕ್ಷ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಅವರ ರಾಜಕೀಯ ಹೋರಾಟದ ಛಲವೂ ಸ್ಮರಣೀಯ.
ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕೈಗಾರಿಕೆ ಸ್ಥಾಪಿಸುವ ಕನಸು ಹೊತ್ತು ಕೊಲ್ಲಾಪುರಕ್ಕೆ ತೆರಳಿ, ರತ್ನಪ್ಪ ಕುಂಬಾರ ಅವರ ಆಶ್ರಯದಲ್ಲಿ ಉದ್ಯಮಿಯಾಗಿ ಬೆಳೆದು, ಸಕ್ಕರೆ ಕಾರ್ಖಾನೆ ಸ್ಥಾಪಿಸಿ, ನಂತರ ಹುಟ್ಟೂರು ನಿಡಗುಂದಿಗೆ ಮರಳಿ ರೈತ ಮುಖಂಡರಾಗಿ ಗುರುತಿಸಿಕೊಂಡ ಅವರ ಜೀವನ ಪಯಣವೇ ಸ್ಫೂರ್ತಿದಾಯಕ.
ಬಸವರಾಜ ಕುಂಬಾರ ಅವರು ವೈಯಕ್ತಿಕವಾಗಿ ನನ್ನೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿದ್ದರು. ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಯಿಂದ ಚೇತರಿಸಿಕೊಂಡು ನಮ್ಮೊಂದಿಗೆ ಮತ್ತೆ ಇರಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿಯೂ ಅಪಾರ ನೋವು ತಂದಿದೆ.
ರೈತರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ, ಹೋರಾಟದ ಮನೋಭಾವದ ಬಸವರಾಜ ಕುಂಬಾರ ಅವರ ಅಗಲಿಕೆ ರೈತ ಸಮುದಾಯ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ಅವರ ಕುಟುಂಬವರ್ಗ, ಬಂಧುಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಎಂ. ಬಿ. ಪಾಟೀಲ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
