ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ಅಪೂರ್ವ ಸಾಧನೆ ತೋರಿದ್ದ ಕುಮಾರಿ ಶಿಫಾ ಜಮಾದಾರ ಈಗ ಹೊಸ ಸಾಧನೆಯ ನಗೆ ಬೀರಲು ಸಜ್ಜಾಗುತ್ತಿದ್ದಾರೆ.
ಶಾಂತಿಯುತವಾಗಿ ಪರಮಾಣು ಬಳಕೆಯ ಉದಾತ್ತ ಧ್ಯೇಯದೊಂದಿಗೆ ಸ್ಥಾಪನೆಯಾಗಿರುವ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ(IಂಇA) ಹಾಗೂ ರಷ್ಯಾ ಸರ್ಕಾರ ಜಂಟಿಯಾಗಿ ರಷ್ಯಾ ದೇಶದ ಆಬ್ನಿನಿಸ್ಕ್ (ಔಃಓIಓSಏ) ಸ್ಥಳದಲ್ಲಿ ಪರಮಾಣು ಶಕ್ತಿಯ ಸದ್ಭಳಕೆ ಹಾಗೂ ಹಸಿವು ನಿವಾರಣೆ ಮೊದಲಾದ ಉತ್ತಮ ಉದ್ದೇಶಗಳಿಗಾಗಿ ಪರಮಾಣು ಬಳಕೆ ಕುರಿತಾದ ಚಿಂತನ-ಮಂಥನ ಹಾಗೂ ಶ್ವೇತ ಪತ್ರ ಬಿಡುಗಡೆ ವಿಶ್ವ ಸಮ್ಮೇಳನದಲ್ಲಿ ಇದೇ ದಿನಾಂಕ ೨೫ ರಿಂದ ಮೂರು ದಿನಗಳ ನಡೆಯಲಿದ್ದು, ಈ ಮಹೋನ್ನತ ಸಮಾವೇಶಲ್ಲಿ ವಿಜಯಪುರದ ಕು.ಶಿಫಾ ಜಮಾದಾರ ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.
ಜಾಗತಿಕ ಮಟ್ಟದ ಈ ಸಮಾವೇಶದಲ್ಲಿ ೧೨೦ ರಾಷ್ಟ್ರಗಳಿಂದ ತಲಾ ಒಬ್ಬರಂತೆ ಪ್ರತಿನಿಧಿಗಳು ಭಾಗವಹಿಸಲಿದ್ದು, ಭಾರತೀಯ ಪ್ರತಿನಿಧಿಯಾಗಿ ಕು.ಶಿಫಾ ಜಮಾದಾರ ಭಾಗವಹಿಸಲಿದ್ದಾರೆ.
೨೦೨೪ ರಲ್ಲಿ ನೇಪಾಳ ರಾಜಧಾನಿ ಖಠ್ಮಂಡುವಿನಲ್ಲಿ ವಿಶ್ವ ಯುವ ನಾಯಕರ ಸಮಾವೇಶದಲ್ಲಿ ಭಾರತದ ಪ್ರತಿನಿಧಿಯಾಗಿ, ೨೦೨೪ ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ದಲ್ಲಿ ಗ್ಲೋಬಲ್ ಯೂಥ್ ಸಮೀಟನಲ್ಲಿಯೂ ಭಾಗವಹಿಸಿದ್ದರು, ೨೦೨೫ ರಲ್ಲಿ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ವಿಶ್ವ ಶೃಂಗ ಸಭೆಯಲ್ಲಿ ಶಿಫಾ ಭಾಗವಹಿಸಿ ವಿಶ್ವ ಶಾಂತಿಯಲ್ಲಿ ಯುವಕರ ಪಾತ್ರ ಕುರಿತು ಅರ್ಥಪೂರ್ಣ ವಿಚಾರ ಮಂಡಿಸಿದ್ದರು, ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟೀನ್ ಸೇರಿದಂತೆ ೨೫ ದೇಶದ ರಾಷ್ಟ್ರಾಧ್ಯಕ್ಷರು ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ಪ್ರಭುತ್ವ ಸಾಧಿಸಿ ತಮ್ಮ ವಿಚಾರಗಳನ್ನು ಅರ್ಥಪೂರ್ಣವಾಗಿ ಮಂಡಿಸುವ ಸಾಮರ್ಥ್ಯ ಹೊಂದಿರುವ ಕು.ಶಿಫಾ ಅವರಿಗೆ ಮತ್ತೊಂದು ಬಾರಿಗೆ ಈ ಅಪೂರ್ವ ಅವಕಾಶ ಒಲಿದು ಬಂದಿದೆ.
ಪರಮಾಣು ಶಕ್ತಿ ಶಾಂತಿಯುತ ಸದ್ಭಳಕೆ, ಹಸಿವು ಮುಕ್ತ ಜಗತ್ತು ನಿರ್ಮಾಣ ಮೊದಲಾದ ಜಾಗತಿಕ ಸಮಸ್ಯೆಗಳ ನಿವಾರಣೆಗಾಗಿಯೂ ಪರಮಾಣು ಶಕ್ತಿ ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವ ಪಡೆದಿದೆ, ರಷ್ಯಾದ ಆಬ್ನಿನಿಸ್ಕ್ ನಗರ ಜಗತ್ತಿನ ಪ್ರಥಮ ಪರಮಾಣು ಘಟಕದ ಸ್ಥಳದಲ್ಲಿ ಈ ಶ್ವೇತ ಪತ್ರ ಬಿಡುಗಡೆ ಸಮಾರಂಭ ನಡೆಯಲಿದೆ, ಈ ಅವಕಾಶ ಒದಗಿ ಬಂದಿರುವುದು ಅತ್ಯಂತ ಸಂತೋಷ ತರಿಸಿದೆ ಎಂದು ಕು.ಶಿಫಾ ಜಮಾದಾರ ಹೇಳಿದರು.

