ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇ.ಮೂ.ಚಿದಾನಂದಶಾಸ್ತ್ರಿ ಹಿರೇಮಠ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಕೋ ಜ್ಞಾನ , ಶ್ವಾನ ನಿದ್ರೆ, ಕಾಕ ದೃಷ್ಟಿ, ಮಿತ ಆಹಾರ ಎನ್ನುವ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅಧ್ಯಾತ್ಮಿಕ ಚಿಂತಕರಾದ ವೇ.ಮೂ.ಚಿದಾನಂದಶಾಸ್ತ್ರಿ ಹಿರೇಮಠ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಆ.೮ ರಂದು ಹಮ್ಮಿಕೊಳ್ಳಲಾಗಿದ್ದ ೨೦೨೬-೨೭ ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣ ಕಲ್ಯಾಣ ಕ್ರಾಂತಿ ಮಾಡಿದರೆ, ಬಂಥನಾಳ ಸಂಗನಬಸವ ಶಿವಯೋಗಿಗಳು ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಅವರು ಹಚ್ಚಿರುವ ಜ್ಞಾನದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದನ್ನು ನಾವು ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ ರೂಪದಲ್ಲಿ ಕಾಣುತ್ತೆವೆ.
ನಾವು ಧೈರ್ಯದಿಂದ, ಶ್ರದ್ದೆಯಿಂದ ಯಾವುದೇ ಕಾರ್ಯ ಕೈಗೊಂಡರು ಅದು ಯಶಸ್ವಿಯಾಗುತ್ತದೆ. ನಮ್ಮಲ್ಲಿ ಸರಿಯಾದ ಜ್ಞಾನ ಇದ್ದರೆ, ಸಾಕು ನಾವು ಜಗತ್ತಿನ ಯಾವುದೇ ಮೂಲೆಯಲ್ಲಿ ಬದುಕಬಹುದು. ಯಾರ ಬಳಿ ವಿಧ್ಯೆ ಇದೆಯೋ ಅವರು ಸರ್ವತ್ರ ಪೂಜಿತೆ ಎಂದರು.
ಯಾರ ಬಳಿ ಯಾವ ಕಲೆ, ಯಾವ ಪ್ರತಿಭೆ ಇದೇ ಎನ್ನುವುದು ಗೊತ್ತಾಗಬೇಕಾದರೆ ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಂತಹ ವೇದಿಕೆ ಅವಶ್ಯ. ಇಂತಹ ವೇದಿಕೆಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಗುರಿ ಸಾಧಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಮನೆಯ ಮಿತ ಆಹಾರವನ್ನೇ ಸೇವಿಸಬೇಕು. ಜ್ಞಾನ ಸಂಪಾದನೆ ಮಾಡಲು ಹಾಗೂ ನಾವು ನಮ್ಮ ಬದುಕು ರೂಪಿಸಿಕೊಳ್ಳಲು ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಈ ವೇಳೇಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅನಿಲ ಭೀ.ನಾಯಕ ಮಾತನಾಡಿ, ಮಹಾವಿದ್ಯಾಲಯ ೮ ದಶಕಗಳನ್ನು ಪೂರೈಸಿದೆ. ನಡೆದಾಡಿದ ದೇವರು ಎಂದೇ ಕರೆಯುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಇದೇ ಮಹಾವಿದ್ಯಾಲಯದ ವಿದ್ಯಾರ್ಥಿ ಎನ್ನುವುದು ಹೆಮ್ಮೆಯ ಸಂಗತಿ.
ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ, ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ನಿಮ್ಮ ಪ್ರತಿಭೆ ಜಗತ್ತಿಗೆ ತೋರಿಸಿ. ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಬದುಕು ರೂಪಿಸುವ ಮೆಟ್ಟಿಲುಗಳು ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಡಾ.ರೇಣುಕಾದೇವಿ ಕಮತರ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯೂ ಒಂದು. ಬಂಥನಾಳ ಸಂಗನಬಸವ ಸ್ವಾಮೀಜಿ, ಫ.ಗು.ಹಳಕಟ್ಟಿ, ಬಂಗಾರಮ್ಮ ಸಜ್ಜನ, ಬಿ.ಎಂ.ಪಾಟೀಲ ಸೇರಿದಂತೆ ಹಲವು ಮಹನೀಯರು ಈ ಸಂಸ್ಥೆ ಕಟ್ಟಲು ತಮ್ಮ ಜೀವನವನ್ನೇ ಗಂಧದಂತೆ ಸವೆಸಿದ್ದಾರೆ. ಆ ಗಂಧ ಇಂದು ಇಡೀ ಜಿಲ್ಲೆಗೆ ಪಸರಿಸಿ ಪ್ರತಿ ಮನೆ-ಮನೆಗಳಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತಿದೆ ಎಂದರು.
ಬಂಗಾರಮ್ಮ ಸಜ್ಜನರಂತಹ ದಾನಿಗಳು, ಬಂಥನಾಳ ಪೂಜ್ಯರು ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಅಕ್ಷರ ದಾಸೋಹವನ್ನೇ ಉಣಬಡಿಸಿದ್ದಾರೆ ಇಂತಹ ಅಪರೂಪದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ ಪರಿಚಯಿಸಿ ಸ್ವಾಗತಿಸಿದರು. ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ ಮತ್ತಿತರರು ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ವಪ್ನಾ ಸಂಗಡಿಗರು ಪ್ರಾರ್ಥಿಸಿದರು, ಡಾ.ಸವಿತಾ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ಭೀಮಸಿ ಮದರಕಂಡಿ ವಂದಿಸಿದರು.

