ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸರ್ಕಾರದ ಆಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡದಂತೆ ಆಗ್ರಹಿಸಿ ರಾಷ್ಟ್ರೀಯ ರೈತ ಸಂಘದ ಪದಾಧಿಕಾರಿಗಳು ಹೆಸ್ಕಾಂ ಎಇಇ ಸತೀಶ ಸುಲಾಖೆ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿಗೆ ಆಗಮಿಸಿದ ರೈತ ಸಂಘದ ಪದಾಧಿಕಾರಿಗಳು ವಿದ್ಯುತ್ ವಿತರಣಾ ಕೇಂದ್ರಗಳ ಮಾರಾಟಕ್ಕೆ ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ಸರ್ಕಾರದ ಆಧೀನದಲ್ಲಿನ ವಿದ್ಯುತ್ ಕೇಂದ್ರಗಳನ್ನು ರೈತರ ಹಾಗೂ ಜನಸಾಮಾನ್ಯರ ಹಿತ ಕಡೆಗಣಿಸಿ ಟಾಟಾ ಪವರ್ ಕಂಪನಿಗೆ ಮಾರಾಟ ಮಾಡುವ ಕ್ರಮ ಖಂಡನೀಯ. ವಿದ್ಯುತ್ ಖಾಸಗೀಕರಣ ರೈತ ವಿರೋಧಿ ನೀತಿಯಾಗಿದೆ. ಖಾಸಗೀಕರಣದಿಂದ ಕೃಷಿ ಹಾಗೂ ರೈತ ಸಮುದಾಯಕ್ಕೆ ತುಂಬಲಾರದ ನಷ್ಟ. ಈಗಾಗಲೇ ಕೃಷಿ ಉತ್ಪನ್ನಗಳ ಉತ್ಪಾದನೆ ಕುಂಠಿತಗೊಂಡಿದೆ. ಈ ಸಮಯದಲ್ಲಿ ವಿದ್ಯುತ್ ವಿತರಣೆ ಖಾಸಗಿಯವರ ಪಾಲಾದರೆ ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ರೈತರ ಬಾಳು ಹಾಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಸರ್ಕಾರ ಈಗ ಇರುವ ಯಥಾಸ್ಥಿತಿಯನ್ನು ಕಾಯ್ದುಕೊಂಡು ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಶಿವಪ್ಪ ಡೋಣೂರ, ಉಪಾಧ್ಯಕ್ಷ ಅಮೀನಪ್ಪಗೌಡ ಬಿರಾದಾರ, ಯುವಮೋರ್ಚಾ ಅಧ್ಯಕ್ಷ ಸಂಗಮೇಶ ಹುಣಸಗಿ, ನಾನಾಗೌಡ ಬೋರಾವತ್, ಸುಭಾಸ್ ಸಜ್ಜನ(ಕೋರವಾರ), ವಿಠ್ಠಲ ಯಾತಗಿರಿ, ಭೀಮನಗೌಡ ಬಿರಾದಾರ(ಹರನಾಳ), ಹಣಮಂತ್ರಾಯಗೌಡ ಪಾಟೀಲ, ಬಂದಗೀಸಾಬ್ ನದಾಫ್, ಬಸನಗೌಡ ಪಾಟೀಲ, ಚಿದಾನಂದ ಮೋಪಗಾರ, ರಾಜಶೇಖರ ಯಾತಗಿರಿ, ಶ್ರೀಮಂತ ರಾಠೋಡ, ಪರಶುರಾಮ ಜಾಧವ ಇದ್ದರು.

