ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ನಲ್ಲಿ ಜೂನ್ 16 ಮಂಗಳವಾರ ಮತ್ತು ಜೂನ್ 17 ಬುಧವಾರ ಎರಡು ದಿನ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ 46 ಡಿಪ್ಲೋಮಾ ಮತ್ತು 48 ಐಟಿಐ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಧಾರವಾಡದ ನಿಡೆಕ್(NIDEK) ಸಂಸ್ಥೆ ಮತ್ತು ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ ಹಾಗೂ ಐಟಿಐ ವತಿಯಿಂದ ಆಯೋಜಿಸಲಾದ ಈ ಕ್ಯಾಂಪಸ್ ಸಂದರ್ಶನದಲ್ಲಿ ನಿಡೆಕ್ ಮುಖ್ಯ ವ್ಯವಸ್ಥಾಪಕ ಸೋಮಶೇಖರ, ವ್ಯವಸ್ಥಾಪಕ ಮಂಜುನಾಥ, ಮಾನವ ಸಂಪನ್ಮೂಲ ವಿಭಾಗದ ಚಂದನಾ ಹಾಗೂ ನಿಶ್ಮಿತಾ ಸಂದರ್ಶನ ನಡೆಸಿದರು.
ಈ ಸಂದರ್ಶನದಲ್ಲಿ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಡಿಪ್ಲೊಮಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗಗಳ ಒಟ್ಟು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನಾನಾ ಐಟಿಐ ವಿಭಾಗಗಳ 110ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಲಿಖಿತ ಪರೀಕ್ಷೆಯಲ್ಲಿ 52 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಮೌಖಿಕ ಸಂದರ್ಶನ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯ ಪ್ರಭುದೇವ ಬಿ ಕಳಸಗೊಂಡ, ಉದ್ಯೋಗಾಧಿಕಾರಿ ಸುಧನ್ವ ವಿ. ಕುಲಕರ್ಣಿ, ಸಂತೋಷ ಹಿರೇಮಠ, ಪಾಂಡುರಂಗ ಅಸ್ಲಂಕರ, ಐಟಿಐ ಉದ್ಯೋಗಾಧಿಕಾರಿ ವಾಗೀಶ ಮರೀಮಠ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಈ ನೇರ ಸಂದರ್ಶನದಲ್ಲಿ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜು ಹಾಗೂ ಐಟಿಐನ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

