ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಂಜಾರಾ ಸಮಾಜದ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಸಚಿವ ಸ್ಥಾನ ನೀಡಬೇಕು ಎಂದು ಬಂಜಾರಾ ಸಮಾಜದ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.
ವಿಜಯಪುರ ಜಿಲ್ಲೆಯವರಿಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು.
ಸಮಾಜದ ಪರವಾಗಿ ಮಾತನಾಡಿದ ಮಾಜಿ ಶಾಸಕ ಹಾಗೂ ಬಂಜಾರಾ ಸಮಾಜದ ಮುಖಂಡ ಮನೋಹರ ಐನಾಪೂರ ಮಾತನಾಡಿ, ಬಂಜಾರಾ ಸಮಾಜ ಲಕ್ಷಾಂತರ ಜನರಿದ್ದಾರೆ, ಬಡತನ ಅನುಭವಿಸಿ ಗುಳೇ ಹೋಗುವ ಸಮುದಾಯ, ಹೀಗಾಗಿ ಸಮುದಾಯದ ಮುಖಂಡರು ಸಚಿವರಾಗುವುದು ಹಾಗೂ ಸಮುದಾಯದ ಧುರೀಣರು ಜನಪ್ರತಿನಿಧಿಗಳಾಗಬೇಕಾಗಿರುವುದು ಅಗತ್ಯವಾಗಿದೆ ಎಂದರು.
ಪ್ರತಿ ಮತಕ್ಷೇತ್ರದಲ್ಲಿ ಬಂಜಾರಾ ಸಮಾಜ ಪ್ರಾಬಲ್ಯ ಹೊಂದಿದೆ, ಪ್ರಸ್ತುತ ಏಕೈಕ ಶಾಸಕರಾಗಿರುವ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಉಪ ಸಭಾಧ್ಯಕ್ಷ ಒಂದು ಉತ್ತಮ ಹುದ್ದೆ, ಆದರೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ, ಸಮಾಜ ಸಂಘಟನೆ ಕಷ್ಟ ಸಾಧ್ಯ, ಸಚಿವರಾದರೆ ಅತ್ಯಂತ ಅನುಕೂಲ ಇದು ಸಮಾಜದ ಒಕ್ಕೊರೆಲಿನ ಒತ್ತಾಯ ಎಂದರು.
ಕಾಂಗ್ರೆಸ್ ಪಕ್ಷ ಬಂಜಾರಾ ಸಮಾಜಕ್ಕೆ ಪ್ರಾತಿನಿಧ್ಯ ನೀಡುತ್ತಲೇ ಬಂದಿದೆ, ಆದರೆ ಇತ್ತೀಚಿನ ದಿನದಲ್ಲಿ ಪ್ರಾತಿನಿಧ್ಯ ಕಡಿಮೆಯಾಗಿದೆ, ರಾಜ್ಯಸಭೆ, ವಿಧಾನ ಪರಿಷತ್ ನಮ್ಮ ಸಮುದಾಯಕ್ಕೆ ಪ್ರಾತನಿಧ್ಯ ದೊರಕಿಲ್ಲ. ಈ ಕೊರತೆಯನ್ನು ನೀಗಿಸಬೇಕಿದೆ ಎಂದರು.
ಜಿ.ಪಂ. ಮಾಜಿ ಸದಸ್ಯ ರಾಜಪಾಲ ಚವ್ಹಾಣ ಮಾತನಾಡಿ, ಸಾಮಾಜಿಕ ನ್ಯಾಯದ ಸೂತ್ರವಾಗಿ ಬಂಜಾರಾ ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕಿತ್ತು, ಕಡಮೆ ಸಂಖ್ಯೆ ಇರುವ ಕ್ರಿಶ್ಚಿಯನ್ ಬಾಂಧವರಿಗೆ ಸಚಿವ ಸ್ಥಾನ ದೊರಕಿದೆ, ಕಾಂಗ್ರೆಸ್ ಬೆನ್ನೆಲುಬಾಗಿ ನಿಂತ ಬಂಜಾರಾಸಮಾಜಕ್ಕೆ ಅವಕಾಶ ನೀಡದಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಮುಖಂಡ ಡಾ.ಬಾಬು ರಾಜೇಂದ್ರ ನಾಯಕ ಮಾತನಾಡಿ, ಬಂಜಾರಾ ಸಮಾಜ ಕೈ ಹಿಡಿದ ಪರಿಣಾಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ಆದರೆ ಸಚಿವ ಸ್ಥಾನ, ಲೋಕಸಭೆ, ವಿಧಾನ ಪರಿಷತ್ ಹೀಗೆ ಎಲ್ಲ ಕಡೆ ತಾರತಮ್ಯ ಸಮಾಜದಲ್ಲಿ ನೋವು ತರಿಸಿದೆ, ಬಂಜಾರಾ ಸಮಾಜದ ಧೋರಣೆಯನ್ನು ಕಾಂಗ್ರೆಸ್ ಕಡೆಗಣಿಸಬಾರದು ಎಂದರು.
ಮುಖಂಡ ಬಿ.ಬಿ. ಚವ್ಹಾಣ ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯೆ ಅನುಸೂಯಾ ಜಾಧವ, ನ್ಯಾಯವಾದಿ ಚಿತ್ರ ನಟ ರಾಹುಲ್ ಐನಾಪೂರ, ರಾಜಕುಮಾರ ಜಾಧವ, ಸುರೇಶ ಬಿಜಾಪೂರ ಮೊದಲಾದವರು ಉಪಸ್ಥಿತರಿದ್ದರು.

