ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಈರಯ್ಯ ಹಲಗಯ್ಯ ಮಠಪತಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 20 ಮತ್ತು 21ರಂದು ಎರಡು ದಿನಗಳ ಕಾಲ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ತರಬೇತಿ ನಡೆಯಲಿದ್ದು, ಮಾಜಿ ಸಚಿವರು ಹಾಗೂ ಯೋಗ ಶಿಕ್ಷಕರಾದ ಎಸ್.ಕೆ. ಬೆಳ್ಳುಬ್ಬಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಈ ತರಬೇತಿಯಲ್ಲಿ ಶಾಲಾ ಮಕ್ಕಳು ಹಾಗೂ ಊರಿನ ಸಾರ್ವಜನಿಕರು ಭಾಗವಹಿಸಿ ಯೋಗದ ಮಹತ್ವವನ್ನು ಅರಿತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲ್ಲಪ್ಪ ಶಿ. ಸೊನ್ನದ, ವಿರುಪಾಕ್ಷೀ ನಾ. ಕೊಲಕಾರ, ಸಂಗಪ್ಪ ಹುಚ್ಚಪ್ಪಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
