ವಿಜಯಪುರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಾದ್ಯಂತ ಕೊರೆಸಲಾಗಿರುವ ೪೩ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಅತ್ಯವಶ್ಯಕ ಪರಿಸ್ಥಿತಿಯಲ್ಲಿ ಮಾತ್ರ ಹೊಸ ಕೊಳವೆ ಬಾವಿ ಕೊರೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಧಿಕಾರಿಗಳಾದ ರಿಷಿ ಆನಂದ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಘಟಕಾಂಶಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲ ಜೀವನ್ ಮಿಷನ್ ಹಾಗೂ ಟಾಸ್ಕ್ ಫೋರ್ಸ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಗದಿತ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಿ, ಬಾಕಿ ಇರುವ ಬಿಲ್ಲುಗಳನ್ನು ತ್ವರಿತವಾಗಿ ವಿಭಾಗೀಯ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು.
ಸುಜಲಾಂ ಗಾವ್ (ಆರ್ ಪಿಡಬ್ಲ್ಯೂ ಎಸ್ ಎಸ್) ಯೋಜನೆಯಡಿ ಐಡಿ ಕ್ರಿಯೇಷನ್ ಪ್ರಕ್ರಿಯೆಯನ್ನು ರಾಜ್ಯ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಸೃಜಿಸಲಾದ ಆಸ್ತಿಗಳ ವಿವರಗಳನ್ನು ಜಿಪಿಎಸ್ ಆಧಾರಿತ ಛಾಯಾಚಿತ್ರಗಳ ಮೂಲಕ ಸಂಬಂಧಿತ ಆ್ಯಪ್‌ನಲ್ಲಿ ದಾಖಲಿಸುವ ಕಾರ್ಯಕ್ಕೆ ವೇಗ ನೀಡಬೇಕು ಎಂದು ಸೂಚಿಸಿದ ಸಿಇಒ ಅವರು, ಈ ನಿಟ್ಟಿನಲ್ಲಿ ಸಹಾಯಕ ಹಾಗೂ ಕಿರಿಯ ಅಭಿಯಂತರರಿಗೆ ಗುರಿ ನಿಗದಿಪಡಿಸಿ ವಾರದೊಳಗೆ ಗಣನೀಯ ಪ್ರಗತಿ ಸಾಧಿಸುವಂತೆ ಎಲ್ಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.
ಐಎಂಐಎಸ್ ವ್ಯವಸ್ಥೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಗಳ ಭೌತಿಕ ಹಾಗೂ ಆರ್ಥಿಕ ಪೂರ್ಣತೆಯ ದಾಖಲೆಗಳನ್ನು ಪರಿಶೀಲಿಸಿ, ಅವುಗಳನ್ನು ಜಲ ಜೀವನ್ ಮಿಷನ್ ಪೋರ್ಟಲ್‌ನಲ್ಲಿ ತಕ್ಷಣವೇ ದಾಖಲಿಸುವಂತೆ ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
“ಹರ್ ಘರ್ ಜಲ್” ಅಭಿಯಾನದ ಕುರಿತು ವಿಶೇಷವಾಗಿ ಚರ್ಚಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರ ನಿರ್ದೇಶನದಂತೆ ಜೂ. ೧೭ ರಿಂದ ೩೦ ರವರೆಗೆ ಜಿಲ್ಲೆಯಾದ್ಯಂತ “ಹರ್ ಘರ್ ಜಲ್ ಅಭಿಯಾನ”ವನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಹಾಗಾಗಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿಗಳನ್ನು ಹಂಚಿಕೆ ಮಾಡಿ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸಿಇಒ ಸೂಚಿಸಿದರು.
ಜಿಲ್ಲೆಗೆ ಹೆಚ್ಚಿನ ಅನುದಾನ ದೊರೆಯಲು “ಹರ್ ಘರ್ ಜಲ್” ಯೋಜನೆಯ ಪ್ರಗತಿ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿವಾರ ಕನಿಷ್ಠ ೨೦ ಗ್ರಾಮಗಳಲ್ಲಿ ವರದೀಕರಣ ಹಾಗೂ ಪ್ರಮಾಣೀಕರಣ ಕಾರ್ಯ ಪೂರ್ಣಗೊಳಿಸುವಂತೆ ಸಹಾಯಕ ಮತ್ತು ಕಿರಿಯ ಅಭಿಯಂತರರಿಗೆ ಗುರಿ ನಿಗದಿಪಡಿಸುವಂತೆ ಸೂಚಿಸಿದರು.
ಇದೇ ವೇಳೆ, ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದಿಂದ ಎರಡು ಮನೆಗಳ ನಲ್ಲಿ ಸಂಪರ್ಕಗಳ ನೀರಿನ ಮಾದರಿಗಳನ್ನು ಹಾಗೂ ಶಾಲೆ, ಅಂಗನವಾಡಿ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳ ನೀರಿನ ಮಾದರಿಗಳನ್ನು ಪ್ರತಿ ತಿಂಗಳು ಎಫ್ ಟಿಕೆ ಕಿಟ್ ಮತ್ತು ಎಚ್೨ಎಸ್ ವಿಲ್ಸ್ ಮೂಲಕ ಪರೀಕ್ಷಿಸಿ ಡಬ್ಲ್ಯೂ ಕ್ಯೂಎಂಐಎಸ್-ಐಎಂಐಎಸ್ ಪೋರ್ಟಲ್ ನಲ್ಲಿ ದಾಖಲಿಸಬೇಕು. ಜೊತೆಗೆ, ಇಲಾಖೆಯ ಪ್ರಯೋಗಾಲಯಗಳಲ್ಲಿ ಮೇಲ್ಮೈ ನೀರಿನ ಮಾದರಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಹಾಗೂ ಅಂತರ್ಜಲ ಮಾದರಿಗಳನ್ನು ವರ್ಷಕ್ಕೆ ಎರಡು ಬಾರಿ ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ಪ್ರಯೋಗಾಲಯ ಸಿಬ್ಬಂದಿಗೆ ಸಿಇಒ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಂಜಯ ಕೋಟೆನ್ನವರ, ಜಿಲ್ಲೆಯ ಎಲ್ಲ ಉಪ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು, ವಿಷಯ ನಿರ್ವಾಹಕರು, ಡಿಪಿಎಂ, ಐಎಂಐಎಸ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.

