ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಇದೇ ಜೂ. ೨೦ರಿಂದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಗಳು ವಾಸ್ತವದಲ್ಲಿ ಪ್ರಾರಂಭವಾಗಲಿದ್ದು, ಜಿಲ್ಲೆಯ ಎಲ್ಲ ೨೦೯೨ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ಮತ್ತು ಪ್ರತಿ ೧೦ ಮತಗಟ್ಟೆಗೆ ಒಬ್ಬರಂತೆ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರು ಇರುವಂತೆ ನೋಡಿಕೊಂಡು ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳವರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಯೋವೃದ್ಧರು ಅನಾರೋಗ್ಯದಿಂದ ಬಳಲುತ್ತಿರುವವರು, ವಿಶೇಷಚೇತನರು, ಬಡವರು ಹಾಗೂ ದುರ್ಬಲರಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ವಯೋವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವವರು, ವಿಶೇಷಚೇತನರು, ಬಡವರು ಹಾಗೂ ದುರ್ಬಲರು ಸಕ್ರಿಯವಾಗಿ ಭಾಗವಹಿಸಲು ಸುಲಭವಾಗುವಂತೆ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬೇಕು ಎಂದರು.
ತಾಲೂಕಾ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿ, ಅವರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ತಿಳುವಳಿಕೆ ನೀಡಿ, ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಬೇಕು ಎಂದ ಅವರು, ಎಸ್ ಐಆರ್ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ-೧೯೫೦ ರಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
೨೦೦೨ ರ ಮತದಾರರ ಪಟ್ಟಿಯನ್ನು ೨೦೨೫ ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡಲು ಇನ್ನು ಅವಕಾಶವಿದ್ದು, ಬಾಕಿ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಅಪರ ಜಿಲ್ಲಾಧಿಕಾರಿ ಅವರು, ಎಲ್ಲ ವಿಧಾನಸಭಾ ಮತಕ್ಷೇತ್ರದ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಇನ್ನೊಂದು ತರಬೇತಿ ನೀಡಬೇಕು ಎಂದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತಗಟ್ಟೆ ಏಜೆಂಟುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರದ ಎಲ್ಲ ಮತಗಟ್ಟೆಗಳಿಗೆ ನೇಮಕಾತಿ ಕುರಿತು ಕ್ರಮ ವಹಿಸಬೇಕು ಎಂದರು.
ಗಣತಿ ಫಾರ್ಮಗಳನ್ನು ಮತಗಟ್ಟೆ ಅಧಿಕಾರಿಗಳು, ಕಡ್ಡಾಯವಾಗಿ ಮತದಾರರಿಗೆ ಅಥವಾ ಸಂಬಂಧಿಕರಿಗೆ ಮಾತ್ರ ನೀಡಲು ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನಾಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳವರನ್ನು ಆಯಾ ತಾಲೂಕುಗಳ ತಾಲೂಕಾ ಮಟ್ಟದ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯಾಪಕ ಪ್ರಚಾರಕ್ಕಾಗಿ ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೊರಗುಳಿಯದಂತೆ, ಅನರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದಿರುವುದನ್ನು ಮತದಾರರ ಸೇರ್ಪಡೆ ಅಥವಾ ಹೆಸರನ್ನು ಅಳಿಸುವ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಪ್ರೇರೇಪಿಸಲು ಮತದಾರರು, ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಸಂಸ್ಥೆಗಳು, ಮೂಲ ನಿವಾಸಿಗಳ ಕಲ್ಯಾಣ ಸಂಘಗಳು, ಮಾಧ್ಯಮ ಸಂಸ್ಥೆಗಳು ವ್ಯಾಪಕವಾಗಿ ತಲುಪುವ ಉದ್ದೇಶದಿಂದ ಸಮಗ್ರ ಜಾಗೃತಿ ಅಭಿಯಾನಗಳ ಮೂಲಕ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಇದೇ ವೇಳೆ ವಿನಂತಿಸಲಾಯಿತು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಕುರಿತು ತೆಗೆದುಕೊಂಡ ಕ್ರಮಗಳ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಿಳುವಳಿಕೆ ನೀಡಬೇಕು ಎಂದು ಡಾ. ಔದ್ರಾಮ ತಿಳಿಸಿದರು.
ಬಿಎಲ್ ಒ ಫೆಸಿಲಿಟೇಶನ್ ಸೆಂಟರ್ ಗಳನ್ನು ತಾಂತ್ರಿಕ ಸಹಾಯ ಬಯಸುವ ಬಿಎಲ್ ಒಗಳಿಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ತಾಂತ್ರಿಕ ನೆರವನ್ನು ಒದಗಿಸುವ ಕುರಿತು, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಗ್ರಾಮ ಆಡಳಿತಾಧಿಕಾರಿ ಕಚೇರಿ, ಪಂಚಾಯತ್ ಕಟ್ಟಡಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಡಿ ಅನುದಾನ ಪಡೆದು ನಿರ್ಮಿಸಿರುವ ಸಮುದಾಯ ಭವನಗಳು, ನಗರ ಪ್ರದೇಶಗಳಲ್ಲಿ ವಾರ್ಡ್ ಕಚೇರಿಗಳು, ಮುಖ್ಯ ಪೌರಾಯುಕ್ತರ ಕಚೇರಿಗಳು, ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಕಚೇರಿ (ತಹಶೀಲ್ದಾರರ ಕಚೇರಿ), ಗ್ರಾಮಒನ್, ನಾಡ ಕಚೇರಿಗಳಲ್ಲಿ ಬಿಎಲ್ ಒ
ಸೆಂಟರ್ ಗಳನ್ನು ಸ್ಥಾಪಿಸಿಕೊಳ್ಳಲು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳವರಿಗೆ ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ವೋಟರ್ ಫೆಸಿಲಿಟೇಶನ್ ಸೆಂಟರ್ ಗಳನ್ನು ಮತದಾರರಿಗೆ ಸುಲಭವಾಗಿ ಹಾಗೂ ಸಾಧ್ಯವಾಗಿರುವಂತಹ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಸ್ಥಾಪಿಸಿ, ಮತದಾರರಿಗೆ ಸಹಾಯವಾಗುವಂತೆ ವ್ಯವಸ್ಥೆ ಮಾಡುವುದು ಬಿಎಲ್ ಒಗಳಿಗೆ ವಹಿಸಿಕೊಟ್ಟು, ಮೇಲುಸ್ತುವಾರಿ ನೋಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲೆಯ ನೋಂದಣಾಧಿಕಾರಿಗಳಾದ ವಿಜಯ ಮೆಕ್ಕಳಕಿ, ರಾಜಶೇಖರ ಡಂಬಳ, ವಿನಯ ಪಾಟೀಲ, ಗುರುನಾಥ ದಡ್ಡೆ, ಚಿದಾನಂದ ಗುರುಸ್ವಾಮಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲದಾರರು ಮತ್ತು ಮತಕ್ಷೇತ್ರದ ತರಬೇತುದಾರರು ಹಾಜರಿದ್ದರು.

