ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ವಿವಿಧ ಯೋಜನೆಗಳಡಿ ಸರ್ಕಾರದ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳ ಹಾಗೂ ಕರ್ನಾಟಕ ಪರಿಶಿಷ್ಟ ಪಂಗಡದ ಮೇದಾರ ಅಲೆಮಾರಿ ಸಮುದಾಯಗಳ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುರಿಗಳನುಸಾರ ಈ ಹಿಂದಿನ ಸಭೆಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸಬೇಕು. ಬ್ಯಾಂಕಿನಲ್ಲಿ ಈ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ವೃಥಾ ವಿಳಂಬ ಮಾಡಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಸಿಇಒ ಅವರ ನೇತೃತ್ವದಲ್ಲಿ ಬ್ಯಾಂಕರ್ಸ ಸಭೆ ನಡೆಸಿ ಅಗತ್ಯ ಸೂಚನೆ ನೀಡಲಾಗುತ್ತಿದೆ. ಇದರಲ್ಲಿ ಸಮಸ್ಯೆ ಇದ್ದರೆ ಸಿಇಒ ಅವರ ಗಮನಕ್ಕೆ ತರಲು ಸಮಿತಿ ಸದಸ್ಯರಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಧಿಕಾರಿಗಳಾದ ಸಿಇಒ ರಿಷಿ ಆನಂದ ಮಾತನಾಡಿ, ಕಳೆದ ಬ್ಯಾಂಕರ್ಸ್ ಮೀಟಿಂಗ್ ನಲ್ಲಿ ಈ ಬಗ್ಗೆ ಸೂಚಿಸಿದೆ. ಅರ್ಹರಿಗೆ ಬ್ಯಾಂಕಿನ ಮಾರ್ಗಸೂಚಿಯಂತೆ ಸಾಲ-ಸೌಲಭ್ಯ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬ್ಯಾಂಕುಗಳು ವೃಥಾ ವಿಳಂಬ ಮಾಡಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.ಈ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸಬೇಕು ಎಂದರು.
೨೦೨೫ ರಿಂದ ೨೬ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಯಡಿ ನಿಗದಿಪಡಿಸಿರುವ ಭೌತಿಕ ಮತ್ತು ಆರ್ಥಿಕ ಗುರಿಗಳ ಮಾಹಿತಿ ವಿವರವನ್ನು ಸಭೆಗೆ ಮಂಡಿಸಲಾಯಿತು.ಜೊತೆಗೆ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು.
ಮಕ್ಕಳ ಶಿಕ್ಷಣಕ್ಕಾಗಿ ಒತ್ತು ನೀಡುವುದು, ಸಮುದಾಯ ಭವನ ನಿರ್ಮಾಣ, ಬೀದಿ ದೀಪ, ಸ್ಮಶಾನ ಭೂಮಿ, ಈ ಸಮುದಾಯ ವಾಸಿಸುವ ಕಾಲೊನಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿ ಪಡಿಸುವಂತೆ ಸಮಿತಿ ಸದಸ್ಯರು ಸಭೆಗೆ ಕೋರಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ತಹಶೀಲ್ದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಸದಸ್ಯರು ಈ ಸಭೆಯಲ್ಲಿ ಸಲ್ಲಿಸಿದ ಕುಂದುಕೊರತೆಗಳಿಗೆ ಪ್ರಾಧಾನ್ಯತೆ ನೀಡಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮನಗೌಡ ಹಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ಕಾಮಣ್ಣ ದೇವಪ್ಪ ದಶವಂತ, ಬಾಬು ಭೀಮಪ್ಪ ಭಜಂತ್ರಿ, ಲಕ್ಷ್ಮಣ ನಾಗಪ್ಪ ಭಜಂತ್ರಿ, ಭೀಮರಾಯ ಲಕ್ಷ್ಮಣ ಕಟ್ಟಿಮನಿ, ವಾಸುದೇವ ಕಾಳೆ ಹಾಗೂ ಪರಿಶಿಷ್ಟ ಪಂಗಡದ ಮೇದಾರ ಅಲೆಮಾರಿ ಸಮುದಾಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ವಿಠ್ಠಲ ಎನ್ ಪರಾಂಡೆ, ಫಕೀರಸ್ವಾಮಿ ಗುರುನಾಥ ಸವಣೂರ, ಶ್ರೀಮತಿ ಮಂದಾಬಾಯಿ ಬಸವರಾಜ ಗೊಳಸಂಗಿ, ರಾಘವೇಂದ್ರ ಬುರುಡ ಹಾಗೂ ಉಮೇಶ ಸದಾಶಿವ ಗೊಳಸಂಗಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.

