ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ವೇತನವನ್ನು ನಿಗದಿತ ಅವಧಿಯಲ್ಲಿ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಮಯಮ ೨೦೧೩ ರನ್ವಯ ಜಿಲ್ಲಾ ಮಟ್ಟದ ೨ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೇರ ಪಾವತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೂ ಸಕಾಲದಲ್ಲಿ ವೇತನ ಪಾವತಿ ಮಾಡಬೇಕು ಎಂದರು.
ನೇರ ವೇತನ ಪಾವತಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರಿಗೆ ಇಎಸ್ಐ, ಇಪಿಎಫ್ ಒದಗಿಸಬೇಕು ಹಾಗೂ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ನಡೆಸಬೇಕು ಎಂದು ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಪ್ರತ್ಯೇಕ ಹೆಲ್ತ್ ಕಾರ್ಡ್ ಮಾಡಿಸಬೇಕು. ಅವರ ಆರೋಗ್ಯ ತಪಾಸಣೆ ಹಾಗೂ ಔಷಧೋಪಚಾರ ವಿವರ ಇರುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗಿರುತ್ತದೆ. ವೈದ್ಯರ ಬಳಿ ಎಲ್ಲ ಮಾಹಿತಿ ದಾಖಲೆ ಇರುವುದರಿಂದ ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇದು ಬಹು ಮುಖ್ಯವಾಗಿದೆ. ಹಾಗಾಗಿ ಅವರ ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ ಎಂದರು.
ಎಲ್ಲ ಪೌರ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿ ಕಡ್ಡಾಯವಾಗಿ ಒದಗಿಸಬೇಕು. ಯಾರಿಗೆ ಇಲ್ಲಿಯವರೆಗೆ ನೀಡಿಲ್ಲ ಅವರಿಗೆ ತಕ್ಷಣ ನೀಡಬೇಕು. ಜೊತೆಗೆ ಸುರಕ್ಷತಾ ಪರಿಕರಗಳಾದ ಹ್ಯಾಂಡ್ ಗ್ಲೌಜ್, ಗನ್ ಬೂಟ್ಸ್ ಹಾಗೂ ಮಾಸ್ಕ ಕಡ್ಡಾಯವಾಗಿ ನೀಡಬೇಕು. ಅವರ ವಿಶ್ರಾಂತಿಗೆ ಮಹಾನಗರ ಪಾಲಿಕೆಯಲ್ಲಿ ಸ್ಥಳಾವಕಾಶ ಕಲ್ಪಿಸಬೇಕು. ಅಲ್ಲಿ ಕುಡಿಯುವ ನೀರು, ಶೌಚಾಲಯ ಇರುವುದು ಕಡ್ಡಾಯವಾಗಿದೆ ಎಂದರು.
ಪೌರ ಕಾರ್ಮಿಕರಿಗೆ ಸರ್ಕಾರದಿಂದ ನೀಡಬೇಕಾಗಿರುವ ಸೌಲಭ್ಯ ಹಾಗೂ ಯೋಜನೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಪ್ರಗತಿ ವರದಿ ಅವಲೋಕಿಸಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಪೌರ ನೌಕರ ೫೯೨ ಇದ್ದು ಇದರಲ್ಲಿ ೩೧೪ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಿ ಅವರಿಗೆ ನೆರವು ಒದಗಿಸಿದೆ. ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ ೧೧೬ ಮನೆಗಳ ಹಕ್ಕುಪತ್ರ ನೀಡಲಾಗಿದೆ. ಬಿಎಲ್ ಸಿ ೧೯೮ ಹಾಗೂ ಎಎಚ್‌ಪಿ ೧೧೬ ಸೇರಿದಂತೆ ೩೧೪ ಮನೆಗಳು ಅನುಮೋದನೆಗೊಂಡಿದ್ದು, ಬಿಎಲ್‌ಸಿ ೧೫೦ ಮನೆಗಳು ಮುಕ್ತಾಯವಾಗಿವೆ ಬಾಕಿ ಉಳಿದ ಮನೆಗಳ ಕಾಮಗಾರಿಗೆ ವೇಗದ ಸ್ಪರ್ಶ ನೀಡಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಎಂಎಸ್ ಕಾಯ್ದೆ ೨೦೧೩ರ ಸೆಕ್ಸೆನ್ ೧೩ ಹಾಗೂ ೧೬ರನ್ವಯ ಯಾವುದೇ ಮ್ಯಾನ್ಯುವೆಲ್ ಸ್ಕ್ವಾವೆಂಜರ್ ಬಳಕೆ ಅಪರಾಧವಾಗಿದೆ. ಹಾಗಾಗಿ ಕಡ್ಡಾಯವಾಗಿ ಯಂತ್ರೋಪಕರಣಗಳನ್ನು ಬಳಕೆ ಮಾಡಬೇಕು. ಈ ವಿಷಯದಲ್ಲಿ ಮುಖ್ಯಾಧಿಕಾರಿಗಳು ಗ್ರಾಪಂ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳ್ಳುವ ಉದ್ಯಮಶೀಲತಾ ಯೋಜನೆ ಅರ್ಹರಿಗೆ ತಲುಪಿಸಬೇಕು. ಸಾಲಸೌಲಭ್ಯಕ್ಕೆ ಸಲ್ಲಿಕೆಯಾಗುವ ಬ್ಯಾಂಕಿನಲ್ಲಿ ಬಾಕಿ ಇರದಂತೆ ನೋಡಿಕೊಂಡು ಬ್ಯಾಂಕಿನವರೊಂದಿಗೆ ಸಂವಹನ ಸಾಧಿಸಬೇಕು. ಸ್ವಾವಲಂಬಿ ಸಾರಥಿ ಯೋಜನೆ, ನೇರ ಸಾಲ ಯೋಜನೆ ಸೇರಿದಂತೆ ನಿಗಮದಿಂದ ಅನುಷ್ಠಾನಗೊಳಿಸುವ ಯೋಜನೆಯು ಯಾವುದೇ ಸಮಸ್ಯೆಯಿಂದ ಬಾಕಿ ಉಳಿಯಬಾರದು. ಸಂಬಂಧಿಸಿದ ಅಧಿಕಾರಿಗಳು ಸಮನ್ವಯ ಸಾಧಿಸಿ ಫಲಾನುಭವಿಗಳಿಗೆ ಯೋಜನೆ ಲಾಭ ತಲುಪಿಸಬೇಕು ಎಂದು ಸಲಹೆ ಮಾಡಿದರು. ಈ ಯೋಜನೆ ಕುರಿತ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.
ಸಫಾಯಿ ಕರ್ಮಚಾರಿ ನಾಮನಿರ್ದೇಶಿತ ಸದಸ್ಯ ಚೆನ್ನು ಕಟ್ಟಿಮನಿ ಮಾತನಾಡಿ, ಪೌರ ಕಾರ್ಮಿಕರಿಗೆ ಸುರಕ್ಷತೆ ದೃಷ್ಟಿಯಿಂದ ಸುರಕ್ಷಾ ಪರಿಕರಗಳನ್ನು ಬಳಕೆಗೆ ಜಾಗೃತಿ ಮೂಡಿಸಬೇಕು. ಅವರಿಗೆ ಆರೋಗ್ಯದ ಬಗ್ಗೆ ಮಾನವೀಯ ಹಿನ್ನೆಲೆಯಲ್ಲಿ ಅವರ ಅನುಪಮ ಸೇವೆಯ ಪ್ರತಿಯಾಗಿ ಅವರಿಗಿರುವ ಸೌಲಭ್ಯ ಒದಗಿಸುವಂತೆ ಸಭೆಗೆ ಕೋರಿದರು.
ಈ ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು, ಸಫಾಯಿ ಕರ್ಮಚಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಮಹಾದೇವ ಎಸ್ ಕಾಂಬಳೆ, ದಯಾನಂದ ಗಿರಮಲ್ಲಪ್ಪ ಅಲ್ಲಿಬಾದಿ, ಶ್ರೀಮತಿ ಮಹಾದೇವಿ ಮಳಸಿದ್ಧ ಹಾದಿಮನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

