ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮ ಪಂಚಾಯಿತಿ ಪಿಡಿಓ ಅವರು ಪಂಚಾಯಿತಿಯಲ್ಲಿ ಜಾತಿ ತಾರತಮ್ಯ ಮಾಡುವುದರ ಜೊತೆಗೆ ಬೋಗಸ್ ಬಿಲ್ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಹಾಗೂ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಗುರುವಾರ ಆಗಮಿಸಿದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪಿಡಿಓ ಅವರ ಬಗ್ಗೆ ಆರೋಪಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ ಮಾತನಾಡಿ, ಗ್ರಾಮದ ಪಿಡಿಓ ಜಿ.ಸಿ.ಕನ್ನೋಳ್ಳಿ ಇವರು ಪಂಚಾಯಿತಿ ಸದಸ್ಯರ ಮಧ್ಯೆ ಜಾತಿ ತಾರತಮ್ಯ ಮಾಡುವುದರ ಜೊತೆಗೆ ಮೇಲ್ವರ್ಗದ ಸದಸ್ಯರ ಬಿಲ್ ಮಾತ್ರ ಪಾವತಿ ಮಾಡುತ್ತಾರೆ. ಅಲ್ಲದೆ ಎನ್‌ಆರ್‌ಇಜಿ ಯೋಜನೆಯಲ್ಲಿ ಎನ್‌ಎಮ್‌ಆರ್ ಹಾಕಿದ ಬಿಲ್‌ಗಳಿಗೆ ಪೇಮೆಂಟ್ ಮಾಡದೇ ವಿನಾಕಾರಣ ಕಿರುಕುಳು ನೀಡುತ್ತಿದ್ದಾರೆ. ಅಲ್ಲದೆ ಎಸ್‌ಸಿ, ಎಸ್‌ಟಿ ಸಮುದಾಯದ ಸದಸ್ಯರೊಂದಿಗೆ ಅಸಭ್ಯವಾಗಿ ವರ್ತಿಸಿ ಕೀಳಾಗಿ ಕಾಣುತ್ತಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಓ ಅವರ ಮೇಲೆ ೨೦೨೩ ರಿಂದ ೨೦೨೬ ವರೆಗಿನ ಬಿಲ್‌ಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಿ, ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಸಹ ಸಂಚಾಲಕ ಬಸವರಾಜ ಇಂಗಳಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ದಯಾನಂದ ರಾಠೋಡ, ರಾಜು ರಾಠೋಡ, ಬೀರು ಹಳ್ಳಿ, ಪರಶುರಾಮ ನಾಯ್ಕೋಡಿ, ಪ್ರಕಾಶ ಗುಡಿಮನಿ ಇದ್ದರು.

