ಪಟ್ಟಣ ಬಂದ್ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇಡೋದು ಇದೆಂಥ ನ್ಯಾಯ? ಎಂದ ಡಿಎಸ್‌ಎಸ್ ಮುಖಂಡರು
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಂದ್ ನೆಪದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಲು ಪ್ರಯತ್ನಿಸಿದರೆ ಉಗ್ರವಾಗಿ ಪ್ರತಿಭಟಿಸುವದಾಗಿ ಡಿಎಸ್‌ಎಸ್ ಮುಖಂಡರಾದ ಬಾಲಚಂದ್ರ ಹುಲ್ಲೂರ ಮತ್ತು ಬಸವರಾಜ ಸಿದ್ದಾಪೂರ ಎಚ್ಚರಿಸಿದರು.
ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜು೧೯ ರಂದು ಮುದ್ದೇಬಿಹಾಳ ಪಟ್ಟಣ ಬಂದ್ ಕರೆ ನೀಡಿರುವ ಹಿನ್ನೆಲೆ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಸಕರಿಗೆ ಸಚಿವ ಸ್ಥಾನ ನೀಡಲು ನಮ್ಮದೇನು ಅಭ್ಯಂತರವಿಲ್ಲ. ಅದಕ್ಕೆ ಹೋರಾಟ ಮಾಡುವದಕ್ಕೂ ನಮ್ಮ ವಿರೋಧವಿಲ್ಲ. ಆದರೆ ಬಂದ್ ಕರೆಗೆ ನಮ್ಮ ತೀರ್ವ ವಿರೋಧ ಇದೆ. ಯಾಕೆಂದರೆ ಪ್ರತೀ ದಿನ ಹಲವಾರು ಬಡವರು ತಾಲೂಕಿನ ಬಹುತೇಕ ಹಳ್ಳಿಗಳಿಂದ ಬೆಳ್ಳಂಬೆಳಿಗ್ಗೆ ಹಾಲು, ಮೊಸರು, ತರಕಾರಿ ಅಂತಾ ಪಟ್ಟಣಕ್ಕೆ ಬಂದು ವ್ಯಾಪಾರ ಮಾಡಿ, ಅದರಿಂದ ಬಂದ ದುಡ್ಡಿನಿಂದ ಅವತ್ತಿನ ದಿನ ಸಾಗಿಸುವ ಅದೆಷ್ಟೋ ಕುಟುಂಬಗಳಿವೆ. ಮೊದಲೇ ಬರಗಾಲ ಅಂಥದರಲ್ಲಿ ಪಟ್ಟಣ ಬಂದ್ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇಡೋದು ಇದೆಂಥ ನ್ಯಾಯ? ನಮ್ಮ ಶಾಸಕರ ಕಾರ್ಯ ವೈಖರಿಯನ್ನ ಗುರುತಿಸಿ ಅವರ ಹೈ ಕಮಾಂಡ್ ಸಚಿವ ಸ್ಥಾನ ನೀಡಬೇಕು. ಹೀಗಿರುವಾಗ ಪಟ್ಟಣ ಬಂದ್ ಮಾಡಿ ಜನಸಾಮಾನ್ಯನ ಹೊಟ್ಟೆಯ ಮೇಲೆ ಹೊಡೆದು ಸಚಿವ ಸ್ಥಾನಕ್ಕೆ ಬೇಡಿಕೆ ಇಡೋದು ಸರಿಯಲ್ಲ.
ಅಷ್ಟಕ್ಕೂ ಬಂದ್ ಮಾಡೋದಕ್ಕೂ ಸಚಿವ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ಹೋರಾಟ ಮಾಡುವದು ಅವರವರ ಹಕ್ಕು, ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಯಾರಾದರೂ ಅಂಗಡಿಕಾರರಿಗೆ ಒತ್ತಾಯ ಮಾಡುವದಾಗಲೀ, ಬೆದರಿಕೆ ಹಾಕುವದಾಗಲೀ ಮಾಡಿದರೆ ಸಾವು ಸಹಿಸಲ್ಲ. ಕೂಡಲೇ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.

