ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಪೈಕಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ (NHM) ಕಾರ್ಯನಿರ್ವಹಿಸುತ್ತಿರುವ ಒಳಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸುವ ಭರವಸೆಯು ಒಂದಾಗಿತ್ತು. ಇದೀಗ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ ಈ ಭರವಸೆ ಇನ್ನೂ ಈಡೇರಿಲ್ಲ ಎಂದು ಸಂತೋಷ್ ಬಗಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ 25 ಸಾವಿರಕ್ಕೂ ಅಧಿಕ ಒಳಗುತ್ತಿಗೆ ನೌಕರರು NHM ಅಡಿಯಲ್ಲಿ 10, 20 ವರ್ಷಗಳಿಂದ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೋವಿಡ್ ಅನ್ನು ಮಹಾಮಾರಿ ದೇಶವನ್ನು ವಕರಿಸಿಕೊಂಡ ಸಂಕಷ್ಟದ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ತಮ್ಮ ಕುಟುಂಬದ ಹಂಗು ತೊರೆದು, ಸೋಂಕಿನ ಭಯದ ನಡುವೆಯೂ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದವರು ಇದೆ NHM ನೌಕರರು. ಅವರ ಸೇವೆಯನ್ನು ಆ ಸಂದರ್ಭದಲ್ಲಿ ಎಲ್ಲರೂ ಶ್ಲಾಘಸಿದರು. ಆದರೆ ಇಂದು ಅದೇ ನೌಕರರು ಉದ್ಯೋಗ ಭದ್ರತೆಗಾಗಿ ಸರಕಾರದ ಮುಂದೆ ಮನವಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರ ಈ ವಿಚಾರದಲ್ಲಿ ವಿಳಂಬ ಮಾಡದೆ ತ್ವರಿತ ಕ್ರಮ ಕೈಗೊಂಡು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಗೌರವಿಸಬೇಕು. NHM ಒಳಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಿ , ಅವರಿಗೆ ಉದ್ಯೋಗ ಭದ್ರತೆ, ವೇತನ ಸೌಲಭ್ಯಗಳು, ಇತರೆ ಸೇವಾ ಸೌಲಭ್ಯಗಳನ್ನು ಒದಗಿಸಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಲ್ಲಿ ಈಡೇರಿಸಿ ತನ್ನ ಬದ್ಧತೆಯನ್ನು ಉಳಿಸಿಕೊಳ್ಳಬೇಕು ಎಂದು ಸಂತೋಷ್ ಬಗಲಿ ಆಗ್ರಹಿಸಿದರು.

