ಇಂಡಿಯಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಭರವಸೆ | ಪುತ್ಥಳಿ ಖರ್ಚು-ವೆಚ್ಚದ ಹಣ ತಾವೇ ಭರಿಸುವ ವಾಗ್ದಾನ
ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದಲ್ಲಿ ದಿ.ದಾದಾಗೌಡ ಪಾಟೀಲರ ಪುತ್ಥಳಿಯನ್ನು ಇನ್ನೆರಡು ತಿಂಗಳಲ್ಲಿ ದಿ. ದಾದಾಗೌಡ ಪಾಟೀಲರ ವೃತ್ತದಲ್ಲಿ ಪ್ರೆತಿಷ್ಠಾಪಿಸಲಾಗುತ್ತದೆ. ಆ ಪುತ್ಥಳಿ ಗೆ ಅವಶ್ಯವಿರುವ ಹಣವನ್ನು ನಾನೇ ನೀಡುತ್ತೇನೆ ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಕಾರ್ಯಕರ್ತರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಾದಾಗೌಡರು ನನ್ನ ರಾಜಕೀಯ ಗುರುಗಳಾಗಿದ್ದರು. ನನ್ನನ್ನು ಮೊದಲನೇ ಬಾರಿಗೆ ಇಂಡಿ ನಗರಕ್ಕೆ ಕರೆತಂದು ಶಾಸಕನಾಗಿ ಮಾಡಿದ ಕೀರ್ತಿ ದಾದಾಗೌಡರಿಗೆ ಸಲ್ಲುತ್ತದೆ. ಹೀಗಾಗಿ ಅವರ ಮೂರ್ತಿ ನಿರ್ಮಾಣದ ವೆಚ್ಚ ನಾನೇ ಸ್ವತಃ ನೀಡುತ್ತೇನೆ ಎಂದರು.
ಶಾಸಕ ಯಶವಂತ್ರಾಯಗೌಡ ಪಾಟೀಲರು ಇಂಡಿಯನ್ನು ಜಿಲ್ಲಾ ಮಾಡಿಯೇ ೨೦೨೮ ರ ಚುನಾವಣೆ ಎದುರಿಸುತ್ತೇನೆ ಎಂದು ಘೋಷಣೆ ಮಾಡಿದ್ದು, ಜಿಲ್ಲಾ ಕೂಗು ಮಂಕಾಗಿ ಸಚಿವ ಸ್ಥಾನದ ಕೂಗು ಹೆಚ್ಚಿಸಿದ್ದಾರೆ. ಜನರನ್ನು ಮರಳು ಮಾಡಲು ಹೇಳಿಕೆ ಕೊಡುವುದನ್ನು ಬಿಟ್ಟು ಕ್ಷೇತ್ರದಲ್ಲಿನ ಹಾಳಾದ ರಸ್ತೆಗಳ ರಿಪೇರಿ ಮಾಡುವತ್ತ ಗಮನ ಹರಿಸಬೇಕು. ಕೇವಲ ಸಚಿವ ಸ್ಥಾನದ ಲಾಬಿ ನಡೆಯುತ್ತಿದ್ದು ಕ್ಷೇತ್ರದಲ್ಲಿ ಅಭಿವೃಧ್ಧಿ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.
ನಾನು ಸಹ ಬರುವ ೨೦೨೮ರಲ್ಲಿ ಕೊನೆಯ ಬಾರಿಗೆ ಸ್ಪರ್ಧೆ ಮಾಡಲಿದ್ದೇನೆ. ಗೆಲುವು-ಸೋಲು ಯಾವುದೇ ಆದರೂ ಮುಂದೆ ರಾಜಕೀಯ ನಿವೃತ್ತಿ ಹೊಂದಲಿದ್ದೇನೆ ಎಂದು ಘೋಷಿಸಿದರು.
ಯಶವಂತರಾಯಗೌಡ ಪಾಟೀಲರು ರಾಜಕಾರಣಕ್ಕಾಗಿ ಜಾತಿ-ಜಾತಿಗಳ ಮಧ್ಯ ಕಲಹ ಸೃಷ್ಠಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಲ್ಲ. ನಾನು ಶಾಸಕನಾದಾಗಿನಿಂದ ಇಲ್ಲಿಯವರೆಗೂ ಜಾತೀಯತೆ ಮಾಡಿಲ್ಲ. ಮಾಡುವುದೂ ಇಲ್ಲ ಎಂದರು.
ಅಣ್ಣುಗೌಡ ಪಾಟೀಲ, ವಿ.ಹೆಚ್. ಬಿರಾದಾರ, ಶಂಕರಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಸಿಕಂದರ್ ಬೋರಾಮಣಿ, ಜಗನ್ನಾಥ ಇಂಡಿ, ಶಂಕರ ಬೋರಾಮಣಿ, ಮಲ್ಲು ಕಾಮಾ, ಮಲ್ಲಿಕಾರ್ಜುನ ಶಿವಪೂರ, ಈರಣ್ಣ ಡೆಂಗಿ, ಸಾಯಬಣ್ಣ ಹೊಟಗಿ, ಸುಭಾಸ ಕ್ಷತ್ರಿ, ಬಾಪುಗೌಡ ಪಾಟೀಲ, ಬುಡ್ಡೇಸಾಬ ಮುಲ್ಲಾ, ಕಲ್ಲಪ್ಪ ಘಂಟಿ ಸೇರಿದಂತೆ ಇನ್ನಿತರರು ಇದ್ದರು.

