ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ (MSW) ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಹಾಗೂ ವೃತ್ತಿ ಅವಕಾಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ “Job Readiness Session for MSW Students” ಎಂಬ ವಿಶೇಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸಂತೋಷ ಹಳೆಮನಿ ಮಾತನಾಡುತ್ತಾ, ಸಮಾಜ ಕಾರ್ಯ ಎಂದರೆ ಕೇವಲ ಪುಸ್ತಕದಲ್ಲಿರುವ ಸಿದ್ಧಾಂತವಲ್ಲ. ಅದು ಬದುಕಿನ ನಡುವೆ ಇಳಿದು, ಜನರ ನೋವಿಗೆ ಕಿವಿಯಾಗಿ, ಅವರ ಶಕ್ತಿಯಾಗುವ ಪ್ರಯೋಗ ಶಾಲೆ ಎಂದರು.
ನಂತರ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗಾವಕಾಶಗಳು, ವೃತ್ತಿಪರ ರೆಸ್ಯೂಮ್ ತಯಾರಿಕೆ, ಸಂದರ್ಶನ ಕೌಶಲ್ಯಗಳು, ಸಂವಹನ ಮತ್ತು ವ್ಯಕ್ತಿತ್ವ ವಿಕಸನ, ಲಿಂಕ್ಡ್ ಇನ್ ನೆಟ್ವರ್ಕಿಂಗ್, ಫ್ರೀಲಾನ್ಸಿಂಗ್ ಹಾಗೂ ಕನ್ಸಲ್ಟೆನ್ಸಿ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದ ಸವಿನೆನಪಿಗಾಗಿ ಪರಿಸರದ ಜೊತೆ ಸಮಾಜ ಕಾರ್ಯ ಸಂಬಂಧಗಳು ಹಚ್ಚ ಹಸರಾಗಿ ಎಲ್ಲೇಡೆ ಪಸರಿಸಲಿ ಎಂದು ಆಶಿಸುತ್ತಾ ಸಮಾಜ ಕಾರ್ಯ ವಿಭಾಗದ ಮುಂದೆ ಸಸಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಗಂಗಾಧರ ಸೋನಾರ, ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕರಾದ ಕಲ್ಲಪ್ಪ ನಂದರಗಿ, ಉಪನ್ಯಾಸಕರುಗಳಾದ ಶಿವಲಿಂಗ ಮೇತ್ರಿ, ಶ್ರೀನಾಥ ಪಾಟೀಲ, ಶರಣಬಸು ಕೊಡಬಾಗಿ ಸೇರಿದಂತೆ ಇತರರು ಹಾಜರಿದ್ದರು.

