ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಮನಸ್ಸಿನಲ್ಲಿ ದ್ವೇಷ, ಅಸೂಹೆ, ಕೆಟ್ಟ ವಿಚಾರಗಳನ್ನು ಇಟ್ಟುಕೊಂಡು ದೇವಸ್ಥಾನಗಳಿಗೆ ಹೋದರೆ ಉಪಯೋಗವಿಲ್ಲ ಬದಲಾಗಿ ಶುಧ್ಧ ಮನಸ್ಸಿನಿಂದ ಹೋದಲ್ಲಿ ತಮ್ಮ ಇಷ್ಠಾರ್ಥ ಆ ದೇವರು ನೆರವೇರಿಸುತ್ತಾನೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಅಲ್ಲಮ ಪ್ರಭುದೇವರ ಪಲ್ಲಕ್ಕಿ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ರೈತ, ಸೈನಿಕ ಮನುಷ್ಯನ ಎರಡು ಕಣ್ಣಿದ್ದಂತೆ, ರೈತ ಕೈಕಟ್ಟಿ ಕುಳಿತರೆ ನಾವು ಮಣ್ಣು ತಿನ್ನಬೇಕಾಗುತ್ತದೆ, ಸೈನಿಕ ಕಣ್ಮುಚ್ಚಿದರೆ ನಾವು ಮಣ್ಣು ಸೇರಬೇಕಾಗುತ್ತದೆ, ದೇಶ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೆ ದೊರೆಯುವುದಿಲ್ಲ ದೇಶ ಸೇವೆ ಸಲ್ಲಿಸಲು ಆಯ್ಕೆಯಾದ ಯೋಧರಿಗೆ ಜನ್ಮನೀಡಿದ ಪಾಲಕರೇ ಪುಣ್ಯವಂತರು ಎಂದರು.
ಇದೇ ಸಂಧರ್ಭದಲ್ಲಿ ಭಾರತ ಮಾತೆಯ ಸೇವೆ ಸಲ್ಲಿಸಲು ನೂತನವಾಗಿ ಚಿಮ್ಮಡ ಗ್ರಾಮದಿಂದ ಆಯ್ಕೆಯಾದ ಹನ್ನೆರಡು ಜನ ಅಗ್ನಿವೀರರಿಗೆ ಹಾಗೂ ಪವಿತ್ರ ಉಮ್ರಾ (ಹಜ್) ಯಾತ್ರೆಯನ್ನು ಯಶಸ್ವಿಯಾಗಿ ಪೋರೈಸಿದ ಪತ್ರಕರ್ತ ಇಲಾಹಿ ಜಮಖಂಡಿಯವರನ್ನು ಸತ್ಕರಿಸಿ ಗೌರವಿಸಲಾಯಿತು.
ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಮಾರುತಿ ಮಮದಾಪೂರ, ಶಿಕ್ಷಕ ಪ್ರಕಾಶ ಪೂಜಾರಿ, ಶಿವಾನಂದ ದಿನ್ನಿಮನಿ, ಪ್ರಕಾಶ ಹಳ್ಳೂರ, ಎಲ್ಲಪ್ಪ ಅರುಟಗಿ ಪರಪ್ಪಾ ಕುಂಬಾರ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.

