ಎಚ್.ಡಿ.ಕೋಟೆ ತಾಲೂಕು ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘದಿಂದ ಮೌನ ಮೆರವಣಿಗೆ | ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ಎರಡನೇ ಹಂತದ ಸಚಿವ ಸಂಪುಟ ರಚನೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಮುಸ್ಲಿಂ ಸಮುದಾಯದ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜಾತ್ಯತೀತ ನಾಯಕರಾಗಿರುವ ಜಮೀರ್ ಅಹಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಬೇಕೆಂದು
ಎಚ್ ಡಿ ಕೋಟೆ ಹಾಗೂ ಸರಗೂರು ತಾಲೂಕು ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘ ಹಕ್ಕೊತ್ತಾಯ ಮಾಡಿ ಮೌನ ಪ್ರತಿಭಟನೆ ನಡೆಸಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದೆ ಜಮಾಯಿಸಿದ ಮುಸ್ಲಿಂ ಬಾಂಧವರು, ಹೆಚ್ ಡಿ ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಮೈಸೂರು ಶಾಸಕ ತನ್ವಿರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಪ್ರಭಾವಿ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿ ಮಾಡಲೇಬೇಕು ಎಂದು ಘೋಷಣೆ ಕೂಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಪುರಸಭೆ ಮಾಜಿ ಉಪಾಧ್ಯಕ್ಷ ಅಸಿಫ್ ಏಜಾಜ್ ಪಾಷಾ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ದೂರವಿಡಲು ಶೇಕಡಾ 95 ರಷ್ಟು ನಮ್ಮ ಸಮುದಾಯ ಕಾಂಗ್ರೆಸ್ ಗೆ ವೋಟು ಹಾಕಿ ಇದೀಗ ದುಃಖ ಪಡುವ ಸ್ಥಿತಿ ತಂದಿಟ್ಟಿದೆ. ನಮಗೆ ಬೇರೆ ರೀತಿಯ ನಿರ್ಧಾರ ತೆಗೆದುಕೊಳ್ಳಲು ವರಿಷ್ಠರು ಅವಕಾಶ ಕೊಡಬಾರದು. ನಮ್ಮ ಸಮುದಾಯದ ಜಾತ್ಯತೀತ ನಾಯಕರಾಗಿರುವ ಜಮೀರ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು. ಶಾಸಕರಾದ ಅನಿಲ್ ಚಿಕ್ಕಮಾದು ಹಾಗೂ ತನ್ವಿರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಮುಸ್ಲಿಂ ಸಮುದಾಯದ ಅಧ್ಯಕ್ಷ ಇಬ್ರಾಹಿಂ ಮಾತನಾಡಿ, ನಮ್ಮ ಸಮುದಾಯದಲ್ಲಿ ಒಗ್ಗಟ್ಟಿಲ್ಲದ ಪರಿಣಾಮ ನಮಗೆ ಈ ಪರಿಸ್ಥಿತಿ ಬಂದಿದೆ. ದಕ್ಷಿಣ ದಾವಣಗೆರೆಯಲ್ಲಿ ನಕಲಿ ಆಡಿಯೋ ರಿಲೀಸ್ ಹಿಂದೆ ಜಮೀರ್ ಅವರಿಗೆ ಡಿಸಿಎಂ ಪಟ್ಟ ತಪ್ಪಿಸುವ ಹುನ್ನಾರ ಅಡಗಿದೆ. ಒಂದು ವೇಳೆ ಡಿಸಿಎಂ ಸ್ಥಾನ ತಪ್ಪಿಸಿದರೆ, ಮುಸ್ಲಿಂ ಸಮುದಾಯ ಬೇರೆ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಮುಸ್ಲಿಂ ಸಮುದಾಯದ ಅಧ್ಯಕ್ಷ ಇಬ್ರಾಹಿಂ, ಯಜಮಾನ ನಜಿರ್ ಅಹ್ಮದ್, ರಹಮತ್ ಅಲಿ, ದಸ್ತಾಗೀರ್, ನೇಮತ್, ಮೊಹಸಿನ್ ಖಾನ್, ಫಾಝಿಲ್, ಜಾವೀದ್, ನವಾಬ್, ಹೋಂಡಾ ನಯಾಜ್, ಅಜರುದ್ದೀನ್, ಶಫಿ, ಖಲೀಮ್, ಅಪ್ಸರ್, ರೆಹಮಾನ್, ಮದ್ಘಾಫಿರುಲ್ಲ, ಶಪ್ರುದ್ದೀನ್ ಸೇರಿದಂತೆ ಹ್ ಎಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ಮುಸ್ಲಿಂ ಸಮುದಾಯದ ಮುಖಂಡರು ಹಾಜರಿದ್ದರು.

