ಕಾರು, ಬೈಕ್, ಡಿಜೆ, ಮದ್ಯಕ್ಕೂ ನಿಷೇಧ | “ಹೆಣ್ಣು ಮಕ್ಕಳನ್ನು ಮಾರಾಟದ ವಸ್ತುವಾಗಿಸಬೇಡಿ” ಬಂಜಾರ ಮಹಾಪಂಚಾಯತ್‌ನ ದಿಟ್ಟ ಘೋಷಣೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶತಮಾನಗಳಿಂದ ಸಮಾಜವನ್ನು ಕಾಡುತ್ತಿರುವ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ತಾಲೂಕಿನ ೨೨ ತಾಂಡಾಗಳು ಐತಿಹಾಸಿಕ ಸಮರ ಸಾರಿವೆ.
ತಾಂಡಾಗಳಲ್ಲಿ ವರದಕ್ಷಿಣೆ ಕೊಡುವುದೂ ಅಪರಾಧ, ಪಡೆಯುವುದೂ ಅಪರಾಧ ಎಂಬ ಕಟ್ಟುನಿಟ್ಟಿನ ನಿಲುವು ತಾಳಲಾಗಿದ್ದು, ಮದುವೆ ಹೆಸರಿನಲ್ಲಿ ನಡೆಯುತ್ತಿದ್ದ ದುಂದುವೆಚ್ಚ, ಡಿಜೆ, ಮದ್ಯಪಾನ ಹಾಗೂ ಕಾರು-ಬೈಕ್ ಉಡುಗೊರೆಗಳ ಸಂಪ್ರದಾಯಕ್ಕೂ ಸಂಪೂರ್ಣ ಬ್ರೇಕ್ ಹಾಕಲಾಗಿದೆ.
ಈ ಕುರಿತು ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಎಆಯ್‌ಬಿಎಸ್‌ಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಡಾ.ಸಂತೋಷ ನಾಯಕ, ಆಲ್‌ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಲಮಾಣಿ, ತಾಲ್ಲೂಕು ಅಧ್ಯಕ್ಷ ಬಹಾದ್ದೂರ ರಾಠೋಡ, ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಲಮಾಣಿ, ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ನಾನಪ್ಪ ನಾಯಕ, ಗ್ರಾಪಂ ಮಾಜಿ ಸದಸ್ಯ ಥಾವರಪ್ಪ ಜಾಧವ, ಅಶೋಕ ರಾಠೋಡ (ನೇಬಗೇರಿ), ನಿವೃತ್ತ ಆರ್‌ಟಿಒ ಅಧಿಕಾರಿ ಜಯರಾಮ ನಾಯಕ, ಹಣಮಂತ ಚವ್ಹಾಣ, ಸಂತೋಷ ಚವ್ಹಾಣ, ರಾಮು ನಾಯಕ, ಸತೀಶ ಚವ್ಹಾಣ, ಕೃಷ್ಣಾ ಚವ್ಹಾಣ, ದಿಲೀಪ ರಾಠೋಡ, ಲಕ್ಷ್ಮಣ ರಾಠೋಡ, ಚಂದ್ರಶೇಖರ ರಾಠೋಡ, ಚಂದ್ರಶೇಖರ ನಾಯ್ಕ, ವಾಲು ನಾಯಕ, ರವಿ ಚವ್ಹಾಣ, ಪಾಂಡು ಚವ್ಹಾಣ, ಹೋಬಾ ನಾಯಕ, ಶ್ರೀಕಾಂತ ನಾಯಕ, ಮಿಥುನ ಚವ್ಹಾಣ, ಜಗದೀಶ ನಾಯ್ಕ, ಖೂಬಪ್ಪ ಚವ್ಹಾಣ, ಬಸವರಾಜ ಚಿಂತಾಮಣಿ, ಏಕನಾಥ ಸೀತಿಮನಿ, ಸಚೀನ ಚವ್ಹಾಣ, ಎಚ್.ಬಿ.ಲಮಾಣಿ ಸೇರಿದಂತೆ ಅನೇಕ ಪ್ರಮುಖರ ಸಮ್ಮುಖದಲ್ಲಿ ನಡೆದ ಬಂಜಾರ ಸಮಾಜ ಮಹಾಪಂಚಾಯತ್‌ನಲ್ಲಿ ಸಾವಿರಾರು ಸಮಾಜ ಬಾಂಧವರ ಸಮ್ಮುಖದಲ್ಲಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.
ಸಾಲದ ಸುಳಿಯಿಂದ ಕುಟುಂಬಗಳನ್ನು ಉಳಿಸಲು ಮಹತ್ವದ ಹೆಜ್ಜೆ:
ವರದಕ್ಷಿಣೆ ಹಾಗೂ ಆಡಂಬರದ ಮದುವೆಗಳಿಂದ ಅನೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕಿ ಜೀವನಪೂರ್ತಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಈ ಅನಿಷ್ಟ ಪದ್ಧತಿಗೆ ಕೊನೆ ಹಾಡುವ ಉದ್ದೇಶದಿಂದ ಸಮಾಜದ ಹಿರಿಯರು, ಯುವಕರು ಮತ್ತು ಧಾರ್ಮಿಕ ಮುಖಂಡರು ಒಗ್ಗಟ್ಟಿನಿಂದ ಈ ಕ್ರಾಂತಿಕಾರಿ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೇ ಮಹಾಪಂಚಾಯತ್‌ನ ತೀರ್ಮಾನದಂತೆ, ಸಮಾಜದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲನೆ ಮಾಡಿಸದ ತಾಂಡಾದ ನಾಯಕರ ಮೇಲೆಯೂ ₹೧ ಲಕ್ಷದವರೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.
“ವರದಕ್ಷಿಣೆಗಿಂತ ವಿದ್ಯೆ ದೊಡ್ಡದು”
ಸಭೆಯಲ್ಲಿ ಮಾತನಾಡಿದ ಮುಖಂಡರು, ಮದುವೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವ್ಯರ್ಥ ಮಾಡುವ ಬದಲು ಅದೇ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣ, ಸ್ವಾವಲಂಬನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಬಳಸಬೇಕು ಎಂದು ಕರೆ ನೀಡಿದರು.
ಲವ್ ಜಿಹಾದ್, ಮತಾಂತರದ ಬಗ್ಗೆ ಆತಂಕ
ಸಭೆಯಲ್ಲಿ ಮಾತನಾಡಿದ ಕೆಲ ಮುಖಂಡರು, ಸಮಾಜದಲ್ಲಿ ಕಂಡುಬರುತ್ತಿರುವ ಲವ್ ಜಿಹಾದ್ ಹಾಗೂ ಮತಾಂತರದಂತಹ ಸವಾಲುಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಆರ್ಥಿಕ ಒತ್ತಡ ಮತ್ತು ವರದಕ್ಷಿಣೆ ಪದ್ಧತಿಯೂ ಕೆಲವು ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆ ಸರಳ ವಿವಾಹ ಮತ್ತು ಸಾಮಾಜಿಕ ಜಾಗೃತಿಯ ಅಗತ್ಯವನ್ನು ಒತ್ತಿ ಹೇಳಿದರು.
ರಾಜ್ಯಕ್ಕೆ ಮಾದರಿಯಾದ ತಾಲೂಕು
೨೨ ತಾಂಡಾಗಳ ಒಗ್ಗಟ್ಟಿನ ಈ ನಿರ್ಧಾರವು ಕೇವಲ ಬಂಜಾರ ಸಮಾಜಕ್ಕೆ ಮಾತ್ರವಲ್ಲ, ಇತರೆ ಸಮುದಾಯಗಳಿಗೂ ಮಾದರಿಯಾಗಿದೆ. ಇಂತಹ ನಿರ್ಧಾರಗಳು ಪ್ರತಿಯೊಂದು ಗ್ರಾಮದಲ್ಲಿ ನಡೆದರೆ ಅದೆಷ್ಟೋ ಹೆಣ್ಣು ಹೆತ್ತ ಕುಟುಂಬಗಳು ನೆಮ್ಮದಿಯಿಂದ ಜೀವಿಸಬಹುದಾಗಿದೆ. ಅಲ್ಲದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವರದಕ್ಷಿಣೆ ನಿಷೇಧ ಕುರಿತು ಹಲವಾರು ಕಾರ್ಯಕ್ರಮಗಳನ್ನು ತಂದಿದ್ದರೂ ಸಂಪೂರ್ಣವಾಗಿ ತೊಲಗದ ಈ ಪಿಡುಗು, ಸಮುದಾಯದ ಒಗ್ಗಟ್ಟಿನ ನಿರ್ಧಾರದ ಮೂಲಕ ಇಡೀ ರಾಜ್ಯಕ್ಕೆ ಮುದ್ದೇಬಿಹಾಳ ತಾಲೂಕು ಮಾದರಿಯಾದಂತಾಗಿದೆ.
ಇನ್ಮುಂದೆ ಏನೆಲ್ಲ ನಿಷೇಧ?
ವರದಕ್ಷಿಣೆ ರೂಪದಲ್ಲಿ ನಗದು ನೀಡುವುದು ಅಥವಾ ಪಡೆಯುವುದು ಸಂಪೂರ್ಣ ನಿಷೇಧ. ಕಾರು, ಬೈಕ್ ಸೇರಿದಂತೆ ದುಬಾರಿ ಉಡುಗೊರೆಗಳಿಗೆ ಸಂಪೂರ್ಣ ಬ್ರೇಕ್. ಮದುವೆಗಳಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಕೆ ನಿಷೇಧ.
ಮದ್ಯದ ವ್ಯವಸ್ಥೆ ಹಾಗೂ ಮದ್ಯಪಾನಕ್ಕೆ ಅವಕಾಶವಿಲ್ಲ.
ಹಲವು ದಿನಗಳ ಹಳದಿ ಕಾರ್ಯಕ್ರಮಕ್ಕೆ ಕಡಿವಾಣ; ಒಂದೇ ದಿನದಲ್ಲಿ ಸರಳ ಆಚರಣೆ.
ಮದುವೆ ವೆಚ್ಚವನ್ನು ವಧು ಮತ್ತು ವರರ ಕುಟುಂಬಗಳು ಸಮಾನವಾಗಿ ಭರಿಸಬೇಕು.
ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಹೆಚ್ಚಿನ ಆದ್ಯತೆ
ನಿಯಮ ಉಲ್ಲಂಘಿಸಿದರೆ ₹೧ ಲಕ್ಷ ದಂಡ!

