ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಇಂಡಿ ನಗರದಲ್ಲಿ ಭೀಕರ ಹಲ್ಲೆ ಘಟನೆ ನಡೆದಿದ್ದು, ನಿವೃತ್ತ ಯೋಧನೊಬ್ಬನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ನಗರದ ಕೆಇಬಿ ಕಚೇರಿ ಎದುರಿನ ಮಸೀದಿ ಸಮೀಪ ಈ ಘಟನೆ ಸಂಭವಿಸಿದೆ.
ಹಿರೇ ಮಸಳಿ ಗ್ರಾಮದ ನಿವಾಸಿ ಹಾಗೂ ನಿವೃತ್ತ ಯೋಧನಾಗಿರುವ ಮಾರುತಿ ಕ್ಷತ್ರಿ (45) ಅವರ ಮೇಲೆ ಮೂವರು ಮುಸುಕುದಾರಿಗಳು ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಾರುತಿ ಕ್ಷತ್ರಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

