ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂವಿಧಾನ ನೀಡಿರುವ ಹಕ್ಕು ಮತ್ತು ಸೌಲಭ್ಯಗಳನ್ನು ಒದಗಿಸಲು ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಪಿಎಸ್‌ಐ ಪ್ರೇಮಾ ಚೌರ ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಭಾನುವಾರ ಜರುಗಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಡಾ:ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶೋತ್ತರಗಳ ಈಡೇರಿಕೆಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಭೆ ನಡೆಸಿ ಕುಂದುಕೊರತೆ ಆಲಿಸಿ ಪರಿಹಾರ ಕೈಗೊಳ್ಳಲಾಗುತ್ತಿದೆ. ಸಮುದಾಯದ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದರು.
ಮಾನವ ಬಂಧುತ್ವ ವೇದಿಕೆಯ ಧುರೀಣ ಸಾಯಿಕುಮಾರ ಬಿಸನಾಳ ಮಾತನಾಡಿ, ಗ್ರಾಮದ ಯುವಕರು ಜನ್ಮದಿನಗಳನ್ನು ಮನೆಗಳಲ್ಲಿ ಆಚರಿಸದೇ ಇಂಡಿ ಹೆದ್ದಾರಿಯಲ್ಲಿ ಆಚರಿಸುತ್ತಿರುವುದು ಖೇದಕರ. ಟ್ರ್ಯಾಕ್ಟರ್‌ಗಳಲ್ಲಿ ಸೌಂಡ್ ಹಚ್ಚಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದು ಇದು ನಿಲ್ಲಬೇಕು ಹಾಗೂ ಗ್ರಾಮವ್ಯಾಪ್ತಿಯಲ್ಲಿ ಇಸ್ಪಿಟ್ ಆಟ, ಗಾಂಜಾ, ಸಾರಾಯಿ ಸಹಿತ ಮಾದಕದ್ರವ್ಯ ಸೇವನೆ ಹಾಗೂ ಮಾರಾಟ ನಿಲ್ಲಬೇಕು ಮತ್ತು ಗ್ರಾಮದ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಅಗತ್ಯವಿದೆ ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರ ನೀಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ತಡೆಯಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ವಿಠ್ಠಲ ದೇಗಿನಾಳ, ಬಾಲಚಂದ್ರ ಗುಡ್ಡಳ್ಳಿ, ನಬಿಸಾಬ್ ಮುಲ್ಲಾ, ಕಾಂತಪ್ಪ ಕನ್ನೋಳ್ಳಿ, ಶರಣಪ್ಪ ಹಂಗರಗಿ, ಶ್ರೀಶೈಲ ದಳವಾಯಿ, ಶಿವಪ್ಪ ಅಂಗಡಿ, ಯಲ್ಲಪ್ಪ ಹೊಸಮನಿ, ಸಾಯಬಣ್ಣ ಹತ್ತರಕಿಹಾಳ, ಭೀಮಾಶಂಕರ ಮಂಗಳೂರ, ಸಿದ್ದವ್ವ ಪೂಜಾರಿ, ಮೀನಾಕ್ಷಿ ವಾಡೆ, ಕಲ್ಲವ್ವ ಮಾದರ, ಸುನಂದಾ ಮಾದರ, ಸಿಬ್ಬಂದಿ ರಮೇಶ ಕುಂಬಾರ, ಸಿದ್ದು ಗಂಗನಳ್ಳಿ ಸಹಿತ ಹಲವರು ಇದ್ದರು.

