ಕಬಿನಿ ಹಿನ್ನೀರಿನಲ್ಲಿ ಬಸವೇಶ್ವರ ದೇಗುಲದ ಅವಶೇಷಗಳು ಗೋಚರ
ವಿಶೇಷ ವರದಿ: ಶ್ರೀಕಂಠ ಈಶ್ವರ್
ಎಚ್ ಡಿ ಕೋಟೆ: ಮಳೆಗಾಲದಲ್ಲಿ ನೀರಿನಿಂದ ತುಂಬಿ ತುಳುಕುವ ಜಲಾಶಯ ನೋಡುವುದೇ ಚೆಂದ. ಜಲಾಶಯ ಭರ್ತಿಗೆ ಇನ್ನು ಎರಡು-ಮೂರು ಅಡಿ ಬಾಕಿ ಇದ್ದಾಗ ರೈತರು ಮತ್ತು ಸ್ಥಳೀಯರು ಸಂತಸ ಪಡುತ್ತಾರೆ, ಏಕೆಂದರೆ ಇದು ನೀರಾವರಿ ಮತ್ತು ಕುಡಿಯುವ ನೀರಿನ ಭರವಸೆ ನೀಡುತ್ತದೆ. ನಾಡಿನ ಸಮೃದ್ಧಿಯ ಸಂಕೇತ ಪ್ರತಿಬಿಂಬಿಸುತ್ತೆ. ಆದರೆ ಕೆಲವೊಮ್ಮೆ ಮಳೆಯ ಕೊರತೆಯಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿ ಜಲಾಶಯ ಖಾಲಿಯಾಗುತ್ತಾ ಹೋಗುತ್ತಿದ್ದಂತೆಯೇ ಜಲಾಶಯ ತನ್ನೊಡಲಲ್ಲಿ ಹುದುಗಿಟ್ಟ ರಹಸ್ಯವನ್ನು ಹೊರಹಾಕಿ ಬಿಡುತ್ತದೆ. ಈ ವೇಳೆ ಕಂಡು ಬರುವ ದೃಶ್ಯಗಳು ವಿಜ್ಞಾನ ಲೋಕವನ್ನೇ ವಿಸ್ಮಯಗೊಳಿಸುತ್ತೆ.
ಕೆಆರ್ ಎಸ್ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಇನ್ನಿತರ ಪಳೆಯುಳಿಕೆಗಳು ಪತ್ತೆಯಾಗುತ್ತೆ. ಅದೇ ರೀತಿ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತ ಹೋದರೆ ಕಂಡು ಕೇಳರಿಯದ ಅಚ್ಚರಿಗಳು ಬೆಳಕಿಗೆ ಬರುತ್ತವೆ. 2013 ಮತ್ತು 2016ರಲ್ಲಿ ಮಳೆ ಕೊರತೆಯಿಂದಾಗಿ ಕಬಿನಿ ಜಲಾಶಯದಲ್ಲಿ ನೀರು ಖಾಲಿಯಾಗಿತ್ತು. ಈ ವೇಳೆ ಹಿನ್ನೀರಿನಲ್ಲಿ ಕಂಡು ಬಂದಿದ್ದ ದೃಶ್ಯಗಳು ಅಚ್ಚರಿಯನ್ನುಂಟು ಮಾಡಿದ್ದವು.
ಇದೀಗ ಮತ್ತೆ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಸಾಕಷ್ಟು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಬಸವೇಶ್ವರ ದೇಗುಲದ ಅವಶೇಷಗಳು ಮತ್ತೆ ಗೋಚರವಾಗಿವೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಬಹುದು ಎಂಬ ಚರ್ಚೆಯ ನಡುವೆಯೇ ಈ ವಿದ್ಯಮಾನ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ದೇವಸ್ಥಾನದ ಕಲ್ಲುಮಂಟಪದ ಭಾಗಗಳು ಕಾಣಿಸಿಕೊಂಡಿವೆ. ಸ್ಥಳೀಯರ ಪ್ರಕಾರ, 15 ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಾದಾಗಲೂ ದೇಗುಲದ ಅವಶೇಷಗಳು ಗೋಚರಿಸಿದ್ದವು. ಮುಂಗಾರು ಮಳೆ ಕಡಿಮೆಯಾಗಿ ಒಳಹರಿವಿನ ಪ್ರಮಾಣ ಇಳಿಮುಖವಾದಾಗಲೆಲ್ಲಾ ಈ ದೇಗುಲದ ಭಾಗಗಳು ಕಾಣಿಸಿಕೊಳ್ಳುತ್ತವೆ ಅಂತಾರೆ.

ಜಲಾಶಯದಲ್ಲಿ ಮುಚ್ಚಿಹೋಗಿದ್ದ ಊರು ಯಾವುದು?
2013ರಲ್ಲಿ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇವಾಲಯಗಳು ಪ್ರತ್ಯಕ್ಷವಾಗಿದ್ದವು. ಇದರ ಇತಿಹಾಸ ಕೆದಕಿದಾಗ ಜಲಾಶಯದ ನೀರಿನಲ್ಲಿ ಹುದುಗಿಹೋಗಿದ್ದ ಊರು ಪತ್ತೆಯಾಗಿತ್ತು. ಈ ಎರಡು ದೇಗುಲಗಳಿದ್ದ ಆ ಊರೇ ಕಿತ್ತೂರು. ಇಲ್ಲಿರುವ ಮಾಂಕಾಳಮ್ಮ ದೇವಿಯು ವೈಷ್ಣವ ದೇವತೆಯಾಗಿದ್ದು, ಕೇರಳದಿಂದ ಬಂದು ಕಿತ್ತೂರಿನಲ್ಲಿ ನೆಲೆಸಿದಳು ಎಂದು ಹೇಳಲಾಗಿದೆ. ಮೊದಲು ಈ ಊರು ಕೀರ್ತಿಪುರವಾಗಿತ್ತಂತೆ. ನಂತರ ಇದು ಕಿತ್ತೂರು ಆಯಿತೆಂಬ ಮಾತುಗಳಿವೆ. ಅಂದಿನ ಕಾಲದಲ್ಲಿ ಕಿತ್ತೂರು ಸಂಪದ್ಭರಿತ ಗ್ರಾಮವಾಗಿತ್ತಂತೆ. ಇಲ್ಲಿನ ಸಾಮಂತರು ಹತ್ತೂರು ಕೊಟ್ಟರೂ ಕಿತ್ತೂರು ಕೊಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಶ್ರೀಮಂತ ಗ್ರಾಮವಾಗಿತ್ತು. ನಂತರ ಕಿತ್ತೂರು ಮೈಸೂರಿನ ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿರುವ ದೇಗುಲಗಳನ್ನು ಆಗಿನ ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ.
ಹೀಗೆಯೇ ಮಳೆ ಬಾರದೆ ಹೋದರೆ ಮತ್ತೊಮ್ಮೆ ಹುದುಗಿಹೋಗಿರುವ ಊರನ್ನು ನೋಡಬಹುದೇನೋ. ಅವಾಗ ಇನ್ಯಾವ ದೇವರ ವಿಗ್ರಹಗಳು ಪತ್ತೆಯಾಗಿ ಮತ್ಯಾವ ಊರು ಗೋಚರಿಸುತ್ತೋ ಗೊತ್ತಿಲ್ಲ. ಸದ್ಯ ಅಂತಹ ಪರಿಸ್ಥಿತಿ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನ ಜನರಿಗೆ ಬಾರದಿರಲಿ. ಮಳೆ ಬಂದು ಜಲಾಶಯ ಭರ್ತಿಯಾಗಲಿ, ರೈತರ ಮುಖದಲ್ಲಿ ಮಂದಹಾಸ ಕಂಡುಬರಲಿ ಎಂಬುದೇ ಎಲ್ಲರ ಆಶಯ.

