ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಳೆದ ೧೧ ತಿಂಗಳುಗಳಿಂದ ವೇತನ ಪಾವತಿ ಮಾಡದಿರುವುದು ಪೌರ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಸರ್, ನಮಗೂ ಸಂಸಾರವಿದೆ. ತಂದೆ-ತಾಯಿ, ಮಕ್ಕಳಿದ್ದಾರೆ. ವರ್ಷಗಟ್ಟಲೆ ನಾವು ದುಡಿದ ವೇತನ ನೀಡದಿದ್ದರೆ ನಾವು ಹೇಗೆ ಬದುಕಬೇಕು. ನೀವಾದರೂ ಸಂಬಂಧಿಸಿದ ಅಧಿಕಾರಿಗಳಿಗೆ, ಶಾಸಕರಿಗೆ ಹೇಳಿ ನಮ್ಮ ವೇತನ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಪತ್ರಕರ್ತರ ಮುಂದೆ ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೆ ಪೌರಕರ್ಮಿಕರಿಗೆ ನಗರಸಭೆ ವತಿಯಿಂದ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಅವರಿಗೆ ಕೂರಲು ವಿಶ್ರಾಂತಿ ಗೃಹವಿಲ್ಲದ್ದರಿಂದ ರಸ್ತೆಯ ಪಕ್ಕದ ಫುಟ್‌ಪಾತ್ ಮೇಲೆಯೇ ಕುಳಿತು, ನಿಂತು ಪೌರಕರ್ಮಿಕರು ಉಪಹಾರ ಸೇವಿಸುತ್ತಾರೆ.
ನಗರದ ಸ್ವಛ್ಛತೆಗೆ ನಸುಕಿನ ೪ ಘಂಟೆಯಿಂದಲೇ ಕಸಗುಡಿಸಲು ಆರಂಭಿಸುವ ಪೌರ ಕಾರ್ಮಿಕರು ಬೆಳಿಗ್ಗೆ ೯:೩೦ ರಿಂದ ೧೦:೩೦ ರವರೆಗೆ ಉಪಹಾರ ಸೇವಿಸಲು ನಗರಸಭೆ ಕಾರ್ಯಲಯದ ಪಕ್ಕದಲ್ಲಿ ಖಾಲಿ ಇರುವ ಕಸದ ಗಾಡಿಗಳನ್ನು ನಿಲ್ಲಿಸುವ ಜಾಗದಲ್ಲಿ, ಫುಟ್‌ಪಾತ್ ಮೇಲೆ ನಿಂತು ಗಬ್ಬು ವಾಸನೆಯ ನಡುವಲ್ಲೇ ಉಪಹಾರ ಸೇವಿಸಬೇಕಾದ ದುಸ್ಥಿತಿ ಇದೆ. ಅವರಿಗೆ ಕೈ ತೊಳೆದುಕೊಳ್ಳಲು ಸಾಬೂನು, ಸಾಬೂನು ಪೌಡರ್ ಅಥವಾ ಡೆಟಾಲ್ ಯಾವುದನ್ನೂ ನೀಡದೆ ಇರುವ ಕಾರಣ ಪೌರಕಾರ್ಮಿಕರು ನೇರವಾಗಿ ನೀರಿನಿಂದ ಮಾತ್ರ ಕೈ ತೊಳೆದುಕೊಳ್ಳುತ್ತಾರೆ. ಹೀಗಾಗಿ ಅವರ ಆರೋಗ್ಯ ಹದಗೆಡುವ ಸಂಭವವಿದೆ. ಇದಕ್ಕೆಲ್ಲ ಪರಿಹಾರ ಎಂದಾಗುತ್ತದೋ ಆ ಭಗವಂತನಿಗೆ ಗೊತ್ತು ಅನ್ನುತ್ತಾರೆ ಪೌರಕಾರ್ಮಿಕರು.
ವೇತನ ಸಮಸ್ಯೆ ರಾಜ್ಯಮಟ್ಟದ್ದಾಗಿದೆ. ನಗರಸಭೆಯಿಂದ ಪೌರ ಕಾರ್ಮಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನಾವು ಟ್ಯಾಕ್ಸ ಸಂಗ್ರಹಿಸಿ ಎರಡು ತಿಂಗಳ ವೇತನ ಮಾಡಿದ್ದೇವೆ. ಶೀಘ್ರವೇ ಇನ್ನೂ ಎರಡು ತಿಂಗಳ ವೇತನ ನೀಡುತ್ತೇವೆ. ಇತ್ತೀಚೆಗೆ ಖಾಯಂ ಮಾಡಿಕೊಂಡ ಪೌರ ಕಾರ್ಮಿಕರಿಗೆ ಸರಕಾರದಿಂದ ೭೫ ಪ್ರತಿಶತ ವೇತನ ಬರಬೇಕು. ನಗರಸಭೆಯಿಂದ ಜನರಲ್ ಫಂಡ್‌ನಲ್ಲಿ ೨೫ ಪ್ರತಿಶತ ಹಾಕಿ ವೇತನ ಮಾಡಬೇಕಾಗುತ್ತದೆ. ಆದರೆ ಮೇಲಿನಿಂದಲೇ ವೇತನ ಬಂದಿಲ್ಲ. ಬಂದ ತಕ್ಷಣ ಎಲ್ಲ ಪೌರ ಕಾರ್ಮಿಕರಿಗೂ ವೇತನ ನೀಡುತ್ತೇವೆ.”
– ಶಿವಾನಂದ ಪೂಜಾರಿ
ನಗರಸಭೆ ಪೌರಾಯುಕ್ತರು
“ನಗರದ ಸ್ವಚ್ಛತೆಗಾಗಿ ಸದಾ ದುಡಿಯುವ ಹಲವು ಪೌರ ಕಾರ್ಮಿಕರಿಗೆ ಬಹಳ ತಿಂಗಳುಗಳಿಂದ ವೇತನ ಪಾವತಿ ಮಾಡಿಲ್ಲ. ಮುಖ್ಯಾಧಿಕಾರಿಗಳು ಸರಕಾರದಿಂದ ಅನುದಾನ ಬಂದಿಲ್ಲ ಎಂದು ತಿಳಿಸಿದ್ದಾರೆ. ಸರಕಾರ ಸಂಪುಟ ಪುನರ್ ರಚನೆಯ ಗದ್ದಲದಲ್ಲಿ ಮತ್ತು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಬಡ ನೌಕರರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಸ್ಥಳೀಯ ಶಾಸಕರು ಸರಕಾರದ ಗಮನ ಸೆಳೆದು ಪೌರಕಾರ್ಮಿಕರ ವೇತನ ನೀಡುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪೌರಕಾರ್ಮಿಕರ ಪರವಾಗಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.”
– ಅನೀಲಗೌಡ ಬಿರಾದಾರ
ಪುರಸಭೆ ಮಾಜಿ ಸದಸ್ಯ

