ಸಾರ್ವಜನಿಕರ ಸಹಕಾರಕ್ಕೆ ತಹಶೀಲ್ದಾರ ಸಂಜಯ ಇಂಗಳೆ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕಾರ್ಯ ಜೂನ್ 30ರಿಂದ ಆರಂಭಗೊಂಡು ಜುಲೈ 29ರವರೆಗೆ ನಡೆಯಲಿದ್ದು, ತಾಲೂಕಿನ ಎಲ್ಲಾ ಮತದಾರರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕು ಎಂದು ತಹಶೀಲ್ದಾರ ಸಂಜಯ ಇಂಗಳೆ ಮನವಿ ಮಾಡಿದ್ದಾರೆ.
ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಈ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜೂನ್ 20ರಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ 2002ರ ಮತದಾರರ ಪಟ್ಟಿ ಹಾಗೂ 2026ರ ಮತದಾರರ ಪಟ್ಟಿಯ ಮತದಾರರ ಮ್ಯಾಪಿಂಗ್ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.
ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಅನುಬಂಧ ನಮೂನೆ-3(Enumeration Form) ವಿತರಿಸಲಿದ್ದು, ಚುನಾವಣಾ ಆಯೋಗ ಸೂಚಿಸಿರುವ 12 ದಾಖಲೆಗಳಲ್ಲಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.
1987ರ ಮೊದಲು ಜನಿಸಿದವರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಇತರೆ ಯಾವುದೇ ಒಂದು ಗುರುತಿನ ದಾಖಲೆಯನ್ನು ಸಲ್ಲಿಸಬಹುದು. 1987ರಿಂದ 2004ರೊಳಗೆ ಜನಿಸಿದವರು ತಮ್ಮ ದಾಖಲೆಯೊಂದಿಗೆ ತಂದೆ ಅಥವಾ ತಾಯಿಯ ಮತದಾರರ ಗುರುತಿನ(EPIC) ಕಾರ್ಡ್ ನೀಡಬೇಕು. 2004ರ ನಂತರ ಜನಿಸಿದವರು ತಮ್ಮ ಹಾಗೂ ತಂದೆ-ತಾಯಿಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ವಿವರಿಸಿದರು.
ಅಕ್ಟೋಬರ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ನಂತರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಹೆಸರು ಸೇರ್ಪಡೆ, ತಿದ್ದುಪಡಿ, ಮೃತ ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರು ತೆಗೆದುಹಾಕುವಿಕೆ ಸೇರಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 18 ವರ್ಷ ಪೂರ್ಣಗೊಳ್ಳುವ ಯುವ ಮತದಾರರು ಸಹ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಪ್ರತಿ 25 ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಪರಿಷ್ಕರಣೆ ಇದಾಗಿದ್ದು, ಯಾವುದೇ ಮತದಾರರ ಹೆಸರನ್ನು ಅನಗತ್ಯವಾಗಿ ಕಡಿತಗೊಳಿಸುವ ಉದ್ದೇಶ ಇಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಪರಿಷ್ಕರಣೆ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಹಶೀಲ್ದಾರರು ಸ್ಪಷ್ಟಪಡಿಸಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಿರಸ್ತೇದಾರ ಆರ್.ಪಿ. ಹಡಪದ, ವಿಷಯ ಕಾರ್ಯನಿರ್ವಾಹಕ ಸಂತೋಷ ನಾಯಕ, ಕಾಂತುಗೌಡ ಪಾಟೀಲ, ಆರ್.ಡಿ. ಹಕ್ಕೆ, ಭೀಮಾಶಂಕರ ವಾಳಿಖಿಂಡಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

