ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮತಕ್ಷೇತ್ರದಲ್ಲಿ ಸಿಮೆಂಟ್ ಸಿಸಿ ರಸ್ತೆ ಹಾಗೂ ಡಾಂಬರೀಕರಣ ಮೂಲಕ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ಇನ್ನು ಉಳಿದ ಅವಧಿಯಲ್ಲಿ ಇನ್ನಷ್ಟು ಅನುದಾನ ತಂದು ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಸಾಲುಮರದ ತಿಮ್ಮಕ್ಕ ಟ್ರಿ ಪಾರ್ಕ್ ಬಳಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಿಂದಗಿ-ವಿಜಯಪುರ ಮುಖ್ಯ ರಸ್ತೆಯಿಂದ ಸಾಲುಮರದ ತಿಮ್ಮಕ್ಕ ಟ್ರಿ ಪಾರ್ಕ್ ವರೆಗೆ ಡಾಂಬರ ರಸ್ತೆ ನಿರ್ಮಾಣಕ್ಕಾಗಿ ಮಂಜೂರಾದ ರೂ.೬೨ ಲಕ್ಷ ಮೊತ್ತದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ಸುಗಮ ಪ್ರಯಾಣಕ್ಕೆ ನೆರವಾಗಲಿದೆ. ಕಾಮಗಾರಿಯನ್ನು ಗುಣಮಟ್ಟದಿಂದ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸಿಂದಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾದಿಕ್ ಸುಂಬಡ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಷಣ್ಮುಖಪ್ಪ ಅಲ್ಲಾಪುರ, ರಮೇಶ ಬಿರಾದಾರ, ಉಮೇಶ ಪೂಜೇರಿ, ಪ್ರವೀಣ ಕಂಠಿಗೊಂಡ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಇದ್ದರು.

