ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಎಸ್‌ವಿವಿಎಂ ಇಂಗ್ಲೀಷ್ ಮೀಡಿಯಂ ಶಾಲೆಯ ಕಟ್ಟಡ ಪುರಸಭೆಯ ಅಗತ್ಯ ಅನುಮತಿ ಪಡೆಯದೆ ಹಾಗೂ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಕಟ್ಟಡ ಸಮೀಪದ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಶರಣಗೌಡ ಬೂದಿಹಾಳ, ವಾಸು ಚಿತ್ರಗಾರ, ಸುಭಾಷ್ ಅಂಗಡಿ, ನಾಗೇಶ್ ಅಂಗಡಿ, ರೇಖಾ ಗುಡಿಹಾಳ, ನೀಲಕಂಠರಾಯ ಕಟ್ಟಿಮನಿ, ವಿಶ್ವನಾಥ, ದಾದಾಗೌಡ ಬಿರಾದಾರ, ನಾಗರಾಜ ಫಣೇದಕಟ್ಟಿ, ಎಸ್.ಎಸ್.ಹುನಗುಂದ, ಎಚ್.ಬಿ.ದಳವಾಯಿ, ಎಸ್.ಎಚ್.ಬೇನಕಟಗಿ, ಪ್ರದೀಪ ಕುಲಕರ್ಣಿ, ಡಿ.ಐ.ಗಡೇದ, ರೇವಣಸಿದ್ದಪ್ಪ ಮೂಲಿಮನಿ, ವಿರೇಶ ಢವಳಗಿ ಹಾಗೂ ಗುರುಸಂಗಪ್ಪ ಅಂಗಡಿ ಸೇರಿದಂತೆ ಮತ್ತೀತರ ನಿವಾಸಿಗಳು ಸಲ್ಲಿಸಿರುವ ಮನವಿಯಲ್ಲಿ, ರಿ.ಸ. ನಂ. ೨೬೨ರಲ್ಲಿ ಶಾಲಾ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದು, ಈ ಕುರಿತು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ, ಬಡಾವಣೆಯಲ್ಲಿ ವಸತಿ ಪ್ರದೇಶದ ಮಧ್ಯೆ ಶಾಲೆ ನಿರ್ಮಾಣವಾದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಅನುಮೋದಿತ ನಕ್ಷೆ (ಬ್ಲೂಪ್ರಿಂಟ್) ಮತ್ತು ಪುರಸಭೆ ನಿಯಮಗಳಿಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎಂಬ ಆರೋಪವನ್ನು ನಿವಾಸಿಗಳು ಮಾಡಿದ್ದಾರೆ.
ಆದ್ದರಿಂದ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ನಿರ್ಮಾಣ ಕಾಮಗಾರಿ ಕಾನೂನುಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಇಲ್ಲದಿದ್ದರೆ ಬಡಾವಣೆಯ ನಿವಾಸಿಗಳು ಪುರಸಭೆ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

