ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಯಲ್ಲಿ ಶನಿವಾರ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ನಾನಾ ಹವ್ಯಾಸಗಳ ತರಬೇತಿ ತರಗತಿಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳು ತಮಗಿಷ್ಟವಾದ ಹವ್ಯಾಸವನ್ನು ಆಯ್ಕೆ ಮಾಡಿಕೊಂಡರು. ಇವರಿಗೆ ನಗರದ ನುರಿತ ತರಬೇತುದಾರರನ್ನು ನೇಮಿಸಿ, ಚೆಸ್, ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್ಬಾಲ್, ಕ್ರಿಕೆಟ್, ಸ್ಕೆಟಿಂಗ್, ನೃತ್ಯ, ಸಂಗೀತ, ಝುಂಬಾ, ಗಾರ್ಡನಿಂಗ್, ಅಗ್ನಿರಹಿತ ಆಹಾರ ತಯಾರಿಕೆ ಮುಂತಾದ ಚಟುವಟಿಕೆಗಳಿಗೆ ತರಬೇತಿಯನ್ನು ವಿದ್ಯಾರ್ಥಿಗಳ ಆಸಕ್ತಿಗನುಣವಾಗಿ ಪ್ರಾರಂಭಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಉಪಪ್ರಾಚಾರ್ಯೆ ವಸುಧಾ ನಾರ್ವೇಕರ ಮಾತನಾಡಿ, ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು. ಸೋಲೇ ಗೆಲುವಿನ ಸೋಪಾನ ಮತ್ತು ಗೆಲುವೆಂಬುದು ಸತತ ಪರಿಶ್ರಮದ ಫಲ ಎಂಬುದನ್ನು ಮಕ್ಕಳಿಗೆ ಕಥೆಯ ಮೂಲಕ ತಿಳಿಸಿದರು.
ಸಧನಗಳ ಮುಖ್ಯಶಿಕ್ಷಕರು ಮತ್ತು ಮುಖ್ಯಬಾಲಕ ಬಾಲಕಿಯರಿಗೆ ಅವರ ಸದನಧ್ವಜ ಮತ್ತು ಸಮವಸ್ತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನೃತ್ಯ ಶಿಕ್ಷಕಿ ಪೂಜಾ ಮತ್ತು ತರಬೇತಿದಾರ ಸಮೀರಖಾನ್ ನೃತ್ಯ ಮಾಡಿ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಿದರು. ಸಂಗೀತ ಶಿಕ್ಷಕಿ ಸಂತೋಷಿ ಕುಸೂರ ಪ್ರಾರ್ಥಿಸಿದರು.
ಸಾಂಸ್ಕೃತಿಕ ಕಾರ್ಯಸಂಯೋಜಕಿ ಫರಾ ಜಹಾಗೀದಾರ ನಿರೂಪಿಸಿದರು. ಕಿರಿಯರ ವಿಭಾಗದ ಸಂಸ್ಕೃತಿಕ ಕಾರ್ಯಸಂಯೋಜಕಿ ಶಿವಾನಿ ವಂದಿಸಿದರು.

