ವಿಜಯಪುರದಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ನಡೆದರೆ ೫೦ ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನೀತಿನ್ ನಬೀನ್ ಹೇಳಿಕೆಯೇ ಎಸ್‌ಐಆರ್ ಕರಾಳತೆಗೆ ಒಂದು ದೊಡ್ಡ ನಿದರ್ಶನವಾಗಿದೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಹೇಳಿದರು.
ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶನಿವಾರ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿಲುವು ವ್ಯಕ್ತಪಡಿಸಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈ ರೀತಿ ಹೇಳಿಕೆ ನೀಡಿದ್ದಾರೆ, ಆ ಮೂಲಕ ಎಸ್‌ಐಆರ್ ಎನ್ನುವುದು ಬಿಜೆಪಿ ಅನುಕೂಲಕರ ಎಂದು ಅವರೇ ಹೇಳಿದ್ದಾರೆ, ಈಗಲಾದರೂ ವಾಸ್ತವಿಕತೆಯನ್ನು ಚುನಾವಣಾ ಆಯೋಗ ಅರಿಯಬೇಕಿದೆ, ಈ ಬಗ್ಗೆ ಬಹಿರಂಗ ಸವಾಲಿಗೆ ಅನೇಕ ಬಾರಿ ಆಹ್ವಾನಿಸಿದರೂ ಸಹ ಚುನಾವಣಾ ಆಯೋಗ ಸವಾಲು ಏಕೆ ಸ್ವೀಕರಿಸುತ್ತಿಲ್ಲ ಎಂದರು.
ಅಲ್ಪಸಂಖ್ಯಾತ ಮುಖಂಡ ಮೊಹ್ಮದ್‌ರಫೀಕ್ ಟಪಾಲ್ ಮಾತನಾಡಿ, ಪಶ್ಚಿಮ ಬಂಗಾಳದ ನಿಕಟಪೂರ್ವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿಯೇ ಲಕ್ಷಾಂತರ ಮತಗಳನ್ನು ಡಿಲೀಟ್ ಮಾಡಿರುವುದು ಒಂದು ವ್ಯವಸ್ಥಿತ ಹುನ್ನಾರವಲ್ಲದೇ ಮತ್ತೇನು? ಈ ಅಪಾಯ ರಾಜ್ಯದಲ್ಲಿಯೂ ಇದೆ, ಲಕ್ಷಾಂತರ ಮತಗಳನ್ನೇ ಕಡಿತಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹುನ್ನಾರವಿದ್ದು ಇದನ್ನು ಪ್ರಬಲವಾಗಿ ಪ್ರತಿಭಟಿಸಬೇಕಿದೆ ಎಂದರು.
ಎಸ್‌ಐಆರ್ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ, ಚುನಾವಣೆಯ ಫಲಿತಾಂಶ ೧೦ ರಿಂದ ೧೫ ಸಾವಿರಗಳ ಅಂತರದಲ್ಲಿಯೇ ಇರುತ್ತದೆ, ಅಂತಹ ಸಂದರ್ಭದಲ್ಲಿ ಸಾವಿರಾರು ಮತಗಳನ್ನು ಡಿಲೀಟ್ ಮಾಡಿದರೆ ಹೇಗೆ? ಇದು ಅವೈಜ್ಞಾನಿಕವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಧುರೀಣ ಯೂಸೂಫ್ ಖಾಜಿ ಮಾತನಾಡಿ, ೧೩ ರಾಜ್ಯಗಳಲ್ಲಿ ಎಸ್‌ಐಆರ್ ಮುಗಿದ್ದು, ೬.೫೦ ಕೋಟಿ ಜನರ ಹೆಸರು ತೆಗೆದು ಹಾಕಲಾಗಿದೆ. ಇದರಲ್ಲಿ ೩೭೨ ಜನ ಮಾತ್ರ ನುಸುಳಿಕೋರರು ಪತ್ತೆಯಾಗಿದ್ದಾರೆ. ಇದರಲ್ಲಿ ಕೇವಲ ೭ ಜನ ಮಾತ್ರ ಮುಸ್ಲಿಂರೇ ಇದ್ದಾರೆ, ಈಗ ರಾಜ್ಯಕ್ಕೂ ಇದು ಕಾಲಿಟ್ಟಿದೆ. ಹೀಗಾಗಿ ಮುಸ್ಲಿಂ, ದಲಿತ, ಪ್ರಗತಿಪರ ಸಂಘಟನೆಗಳ ಸೇರಿ ೧೫೦ ಸಂಘಟನೆಗಳು ಒಂದಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪ್ರಮುಖರಾದ ಆರೀಫ್ ಮುಲ್ಲಾ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಸ್ವಾಗತವಿದೆ, ವಿಶೇಷ ಪರಿಷ್ಕರಣೆಗೆ ಸರ್ಕಾರದ ಯಾವುದೇ ಇಲಾಖೆಯಿಂದ ಅನುಮೋದನೆ ಆಗಿಲ್ಲ. ಒಂದೇ ರೀತಿಯ ಅರ್ಜಿ ನಮೂನೆ ಇಲ್ಲ. ಮತದಾರರು ತಮ್ಮನ್ನು ತಾವೇ ಗುರುತಿಸಿಕೊಳ್ಳಬೇಕಿದೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಬಹುಮುಖ್ಯವಾಗಿ ಅವೈಜ್ಞಾನಿಕವಾದ ಲಾಜಿಕಲ್ ಪದ್ಧತಿ ಕೈಬಿಡಬೇಕು, ಮೇಲ್ಮನವಿಗೆ ೬ ತಿಂಗಳು ಅವಕಾಶ ಕೊಡಿ ಎಂದು ಒತ್ತಾಯಿಸಿದರು.
ಪ್ರಮುಖರಾದ ಶ್ರೀನಾಥ ಪೂಜಾರಿ, ಭಿ. ಭಗವಾನ ರೆಡ್ಡಿ, ಅಕ್ರಂ ಮಾಶ್ಯಾಳಕರ, ಪ್ರಭುಗೌಡ ಬಿರಾದಾರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

