ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮದ ಶ್ರೀಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಸಂಸದರ ನಿಧಿಯಿಂದ ರಂಗಮಂಟಪ ನಿರ್ಮಾಣಕ್ಕೆ ಅನುದಾನ ಒದಗಿಸಲು ಆಗ್ರಹಿಸಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಪಡಗಾನೂರ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸಂಸದರನ್ನು ಭೇಟಿ ಮಾಡಿದ ಗ್ರಾಮಸ್ಥರು ರಂಗಮಂಟಪ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದ ಗುರುನಾಥ ಮುರುಡಿ ಮಾತನಾಡಿ, ತಾಲ್ಲೂಕಿನ ಪಡಗಾನೂರ ಗ್ರಾಮದ ಶ್ರೀಸೋಮೇಶ್ವರ ದೇವಸ್ಥಾನ ಬಾದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಕಟ್ಟಡವಾಗಿದೆ. ಇಲ್ಲಿ ಪ್ರತಿ ವರ್ಷ ಯುಗಾದಿಯ ನಂತರ ಏಕಾದಶಿಯಂದು ಜಾತ್ರಾ ಮಹೋತ್ಸವ ಜರುಗುತ್ತದೆ. ಈ ಜಾತ್ರೆಯ ಅಂಗವಾಗಿ ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಈ ಎಲ್ಲ ಕಾರ್ಯಕ್ರಮಗಳಿಗೆ ಸೂಕ್ತವಾದ ರಂಗಮಂಟಪ ಇಲ್ಲದೆ ಇರುವುದರಿಂದ ಸಾಕಷ್ಟು ಬಾರಿ ತೊಂದರೆಯಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳ ಯಶಸ್ವಿಗಾಗಿ ರಂಗಮಂಟಪ ಅವಶ್ಯಕತೆಯಿದೆ. ಜೊತೆಗೆ ದೇವಸ್ಥಾನ ಆವರಣದಲ್ಲಿ ಹೆಚ್ಚುವರಿ ಜಾಗೆ ಇರುವುದರಿಂದ ಇಲ್ಲಿ ರಂಗಮಂಟಪ ನಿರ್ಮಾಣ ಮಾಡಬಹುದಾಗಿದೆ. ಆದ್ದರಿಂದ ಸಂಸದರ ನಿಧಿಯಿಂದ ಅನುದಾನ ಒದಗಿಸಿ ರಂಗಮಂಟಪ ನಿರ್ಮಾಣಕ್ಕೆ ಸ್ಪಂದನೆ ಹಾಗೂ ಸಹಕಾರ ನೀಡಬೇಕು ಎಂದರು.
ಮನವಿ ಸ್ವೀಕರಿಸಿದ ಸಂಸದರು ಬೇಡಿಕೆಗೆ ಅಗತ್ಯವಾದ ಅನುದಾನ ಒದಗಿಸುವ ಭರವಸೆ ನೀಡಿದರು.
ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಗ್ರಾಮಸ್ಥರಾದ ಆಕಾಶ ಕಬ್ಬಿನ, ಸಂತೋಷ ದೋತ್ರೆ, ಶಿವನಗೌಡ ಪಾಟೀಲ, ರಾಜಶೇಖರ ಬೆನಕನಳ್ಳಿ, ಸಾಗರ ಭೋವಿ, ವಿಶ್ವನಾಥ ಪತ್ತಾರ, ಸಂಜಯ ಕಬ್ಬಿನ, ಸಂತೋಷ ಮುಳಸಾವಳಗಿ, ಚಂದು ಪೂಜಾರಿ ಇದ್ದರು.

