ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶ ಸಮೃದ್ಧಿಯತ್ತ ಸಾಗಬೇಕಾದರೆ ರಾಮರಾಜ್ಯದ ಕನಸು ನನಸಾಗಬೇಕು ಎಂದು ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಇಲ್ಲಿಯ ಶ್ರೀಕೃಷ್ಣ ವಾದಿರಾಜ ಮಠದ ಆವರಣದಲ್ಲಿ ಅಂದಾಜು ರೂ.೭ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿದ್ಯಾರ್ಥಿ ನಿಲಯದ ದಾನಿಗಳನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.
ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಅನಕೂಲ ಕಲ್ಪಿಸಲು ಹಿರಿಯ ಸ್ವಾಮಿಗಳು ಆರು ದಶಕದ ಹಿಂದೆ ನಿರ್ಮಿಸಿದ ವಿದ್ಯಾರ್ಥಿ ನಿಲಯ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ಆಧುನಿಕರಣಗೊಳಿಸಿ ಇಂದಿನ ತಂತ್ರಜ್ಞಾನಯುಗದಲ್ಲಿ ಸಮಸ್ತ ಬಡವರಿಗೂ ನೂತನ ಕಟ್ಟಡ ನಿರ್ಮಿಸಿಕೊಡುವ ಯೋಜನೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ. ರೂ.ಒಂದು ಕೋಟಿಯಷ್ಟು ಹಣ ಸಂಗ್ರಹಿಸಿ ಕೊಡುವ ಭರವಸೆ ಕೊಟ್ಟಿದ್ದಾರೆಂದು ಪ್ರಶಂಸಿಸಿದ ಅವರು ಸಂಸದ ರಮೇಶ ಜಿಗಜಿಣಗಿ ಅವರೂ ಅನುದಾನ ಬಿಡುಗಡೆ ಮಾಡಿದ್ದಾರೆಂದು ಶ್ಲ್ಯಾಘಿಸಿದರು.
ಅನೇಕ ಜನ ಹಿರಿಯರು ಒಂದು ಕೋಣೆ ನಿರ್ಮಾಣಕ್ಕೆ ರೂ ೫ ಲಕ್ಷ ಕೊಡಲು ಬಂದಿದ್ದಾರೆಂದ ಅವರು, ಹಣ ಮಹತ್ವ ಅಲ್ಲ ಅವರ ಪ್ರೀತಿ ವಿಶ್ವಾಸ ಪ್ರಮುಖ ಎಂದರು.
ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ಪೇಜಾವರ ಮಠಕ್ಕೂ ವಿಜಯಪುರ ಜಿಲ್ಲೆಯ ಜನರಿಗೂ ಅವಿನಾಭಾವ ಸಂಬಂಧ ಇದೆ ಎಂದರು.
ಹಿರಿಯ ಸ್ವಾಮಿಗಳು ೧೯೬೪ ರಲ್ಲಿ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಕಟ್ಟಿದರು. ೧೯೭೨ ರಲ್ಲಿ ಬರಗಾಲ ಬಿದ್ದಾಗ ಸಿಂದಗಿ ತಾಲೂಕಿನ ಗ್ರಾಮಗಳಿಗೆ ಗಂಜಿ ಕೇಂದ್ರ ತೆರೆದರು. ಚಿಕ್ಕಪಡಸಲಾಗಿ ಬಾಂದಾರ ನಿರ್ಮಾಣಕ್ಕೆ ಶ್ರಮದಾನ ಮಾಡಿದ್ದು ವಿಶೇಷ. ಸದಾ ವಿಜಯಪುರ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಐದು ವರ್ಷಗಳ ನಂತರ ಬರಲಿರುವ ಗುರುಗಳ ಜನ್ಮ ಶತಮಾನೋತ್ಸವ ಒಳಗಾಗಿ ಅವರ ಎಲ್ಲ ಕನಸುಗಳನ್ನು ನನಸು ಮಾಡುವ ಉದ್ದೇಶ ಪ್ರಸ್ತುತ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥರು ಹೊಂದಿದ್ದಾರೆ. ಅವರೊಂದಿಗೆ ಭಕ್ತಾದಿಗಳು ಕೈಜೋಡಿಸೋಣ ಎಂದು ಕರೆ ನೀಡಿದರು.
ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಸ್ವಾಗತಿಸಿ ಶ್ರೀಗಳ ಸಮಸ್ತ ಯೋಜನೆಗಳ ವಿವರಣೆ ನೀಡಿದರು.
ರೂ.೫ ಲಕ್ಷ ದೇಣಿಗೆ ಸಂಕಲ್ಪ ಮಾಡಿದ ಗಿರೀಶ ಕುಲಕರ್ಣಿ ಹಾಗು ಹೆಚ್ಚಿನ ದಾನ ಕೊಡಲು ಮುಂದಾದ ಡಾ ಢಾಣಕ ಶಿರೂರ, ಗುರುರಾಜ ಸೊಂಡೂರ ಅವರನ್ನು ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಶ್ರೀ ಮಠದ ಸದಸ್ಯರಾದ ಡಾ ಮಂಗಲಗಿ, ಡಾ. ಮಲಘಾಣ, ಅಶೋಕರಾವ್ ವಿಕಾಸ ಪದಕಿ, ವ್ಹಿ ಬಿ ಕುಲಕರ್ಣಿ, ಗೋವಿಂದ ಜೋಶಿ ಮತ್ತು ವಿಕಾಸ ಪದಕಿ ವಿಜಯ ಜೋಶಿ ಡಾ ಪ್ರಾಣೇಶ ಜಹಾಗೀರದಾರ ಅನೇಕ ಗಣ್ಯರು ಉಪಸ್ಥಿತರಿದ್ದರು.

