ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜಮಖಂಡಿಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್)ದಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಯಾವುದೇ ಮಗುವನ್ನು ದುಡಿಮೆಗೆ ಬಳಸದೇ, ಶಿಕ್ಷಣದ ಹಕ್ಕನ್ನು ಗೌರವಿಸಿ, ಬಾಲಕಾರ್ಮಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವ ಸಂಕಲ್ಪದೊಂದಿಗೆ ಪ್ರಮಾಣವಚನ ಸ್ವೀಕರಿಸಲಾಯಿತು.
ಕಾಲೇಜಿನ ದೈಹಿಕ ನಿರ್ದೇಶಕರಾದ ಪ್ರೊ. ಮಹಾದೇವ ಗಲಬಿ ಅವರು ಪ್ರತಿಜ್ಞಾ ವಿಧಿ ಬೋಧಿಸಿ, ಬಾಲಕಾರ್ಮಿಕ ಪದ್ಧತಿಯು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಸಾಮಾಜಿಕ ಪಿಡುಗಾಗಿದ್ದು, ಪ್ರತಿಯೊಬ್ಬ ನಾಗರಿಕನು ಇದರ ವಿರುದ್ಧ ಜಾಗೃತನಾಗಿರಬೇಕೆಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯ ದೊರಕುವುದು ಮೂಲಭೂತ ಹಕ್ಕಾಗಿದ್ದು, ಬಾಲಕಾರ್ಮಿಕತೆಯ ನಿರ್ಮೂಲನೆಗೆ ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯವೆಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರೊ. ಅಶ್ವಿನಿ ಅನಂತಪೂರ ಹಾಗೂ ಪ್ರೊ. ಪ್ರೇಮಾನಂದ ಹಿರೇಮಠ ಅವರು ಮಾತನಾಡಿ, ಮಕ್ಕಳನ್ನು ದುಡಿಮೆಗೆ ತಳ್ಳುವ ಬದಲಿಗೆ ಶಿಕ್ಷಣದತ್ತ ಪ್ರೋತ್ಸಾಹಿಸುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಬಾಲಕಾರ್ಮಿಕತೆಯ ವಿರುದ್ಧ ಜನಜಾಗೃತಿ ಮೂಡಿಸಲು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮವು ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿತು.

