ತಾಳಿಕೋಟೆಯಲ್ಲಿ ರಜಪೂತ ಸಮಾಜದ ಮುಖಂಡರ ಹೇಳಿಕೆ | ನಿರ್ಲಕ್ಷಿಸಿದರೆ ಹೋರಾಟದ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಕಲ್ಬುರ್ಗಿ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಜೇವರ್ಗಿ ಮತಕ್ಷೇತ್ರದ ಶಾಸಕ ಡಾ.ಅಜಯಸಿಂಗ್ ಅವರಿಗೆ ನೂತನ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಲೇಬೇಕು, ಇಲ್ಲದಿದ್ದರೆ ಅವರ ಲಕ್ಷಾಂತರ ಅಭಿಮಾನಿಗಳೊಂದಿಗೆ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ರಜಪೂತ ಸಮಾಜದ ಯುವ ಮುಖಂಡ ವಿಜಯಸಿಂಗ್ ಹಜೇರಿ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಸಿದರು.
ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಳಿಕೋಟೆ ರಜಪೂತ ಸಮಾಜದ ವತಿಯಿಂದ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೪೫ ವರ್ಷಗಳವರೆಗೆ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಕಾಂಗ್ರೇಸ್ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವದರೊಂದಿಗೆ ಅಪಾರವಾದ ಕೊಡುಗೆಯನ್ನು ಶಾಸಕ ಡಾ.ಅಜಯಸಿಂಗ್ ಅವರು ಕೊಟ್ಟಿದ್ದಾರೆ. ಮೂರು ಅವಧಿಗೆ ಶಾಸಕರಾಗಿ, ದೆಹಲಿ ವಿಶೇಷ ಪ್ರತಿನಿಧಿಯಾಗಿ ಸಾಕಷ್ಟು ಕೆಲಸ ಮಾಡಿದ ಅನುಭವ ಹೊಂದಿದವರಾಗಿದ್ದಾರೆ. ಸಚಿವ ಸ್ಥಾನ ನಿಭಾಯಿಸಬಲ್ಲ ಎಲ್ಲ ಅರ್ಹತೆಯೂ ಅವರಲ್ಲಿದೆ ಎಂದರು.
ರಜಪೂತ ಸಮಾಜದ ಹಿರಿಯರಾದ ಭರತಸಿಂಗ್ ಗೋವಿಂದಸಿಂಗ್ ಮೂಲಿಮನಿ ಹಾಗೂ ಸಮಾಜದ ಮುಖಂಡರಾದ ಭರತಸಿಂಗ್ ವಿಜಾಪುರ, ಸುರೇಶ ಹಜೇರಿ, ಹಾಗೂ ನವೀನ್ ಗೌಡಗೇರಿ ಅವರು ಮಾತನಾಡಿ ರಜಪೂತ ಸಮಾಜ ಅಲ್ಪಸಂಖ್ಯಾತ ಸಮಾಜವಾಗಿದೆ. ನಮಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಗೋವಿಂದಸಿಂಗ್ ಗೌಡಗೇರಿ, ಬಾಬು ಹಜೇರಿ, ಜೈಸಿಂಗ್ ಮೂಲಿಮನಿ, ರಘುಸಿಂಗ್ ಹಜೇರಿ(ಶೇಠ), ಸುರೇಶಕುಮಾರ ಹಜೇರಿ, ರಮೇಶ ಗೌಡಗೇರಿ, ಪ್ರಹ್ಲಾದ್ ಹಜೇರಿ, ಸಂತೋಷ ಹಜೇರಿ(ಭವಾನಿ), ಭವನಸಿಂಗ್ ಹಜೇರಿ, ಸಂಜೀವಕುಮಾರ ಹಜೇರಿ, ಕೆಸರಸಿಂಗ್ ಹಜೇರಿ, ದಿಲೀಪಸಿಂಗ್ ಹಜೇರಿ, ಪ್ರದೀಪ ವಿಜಾಪುರ, ವಿಠಲಸಿಂಗ್ ಹಜೇರಿ, ಅರುಣ ದಡೇದ, ಸುನಿಲ್ ಬಿಜಾಪುರ, ಶಿವಾ ಗೌಡಗೇರಿ, ನಿಖಿಲ್ ಮೂಲಿಮನಿ, ವಿಶ್ವ ನಾಯಕ, ಗಂಗಾರಾಮ ಬಿಜಾಪುರ, ರಾಘು ಮೂಲಿಮನಿ, ರಾಘು ಕೋಟಿಮನಿ, ಬಬ್ಲು ಬಿಜಾಪುರ ಮೊದಲಾದವರು ಇದ್ದರು.

