ಮನಗೂಳಿ ಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಗುರುವಾರ ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಅವರು ವೀಕ್ಷಿಸಿ ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಮತ್ತು ಸಾರ್ವಜನಿಕರ ಆಶಯದಂತೆ ಪ್ರಗತಿಯಲ್ಲಿರುವ ಕೆರೆ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿ, ಗುಣಮಟ್ಟವನ್ನು ಪರಿಶೀಲಿಸಿದೆ. ಈ ಯೋಜನೆಯಿಂದ ಕ್ಷೇತ್ರದ ರೈತರಿಗೆ ಸಕಾಲದಲ್ಲಿ ನೀರಾವರಿ ಸೌಲಭ್ಯ ದೊರೆಯುವುದರ ಜೊತೆಗೆ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ. ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿರುವುದಾಗಿ ಹೇಳಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿ, ರೈತರ ಕಲ್ಯಾಣ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಗಳಲ್ಲಿ ನಾನು ಸದಾ ಬದ್ಧ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಿಖಿಲೇಶ ಪಾಟೀಲ, ಮನಗೂಳಿ ಪಟ್ಟಣ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಶೇಖಪ್ಪಗೌಡ ಬಿರಾದಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಡಾ.ಆರ್.ಕೆ.ಪತ್ತಾರ, ವಿಜಯಕುಮಾರ ರಜಪೂತ, ಗುತ್ತಿಗೆದಾರ ಪವಾರ ಇತರರು ಇದ್ದರು.

