ಆಯಾ ರಾಜಕೀಯ ಪಕ್ಷಗಳಿಗೆ ವಿಜಯಪುರ ನಗರ ಮತಕ್ಷೇತ್ರದ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಆಯಾ ರಾಜಕೀಯ ಪಕ್ಷದವರು ತಮ್ಮ ಮತಗಟ್ಟೆ ಮಟ್ಟದ ಏಜೆಂಟರನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು ಎಂದು ವಿಜಯಪುರ ನಗರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾದ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಕೈಗೊಳ್ಳುವ ಕುರಿತಂತೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಇತ್ತಿಚಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಮತಕ್ಷೇತ್ರದಲ್ಲಿ ೨೦೨೬ರ ಮೇ ೨೬ ರಂತೆ ಒಟ್ಟು ೨,೯೨,೧೭೯ ಮತದಾರರಿದ್ದಾರೆ. ಒಟ್ಟು ೨೮೫ ಮತಗಟ್ಟೆಗಳಿದ್ದು ೨೮೫ ಜನ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ೨೮ ಜನ ಮತಗಟ್ಟೆ ಮಟ್ಟದ ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜಕೀಯ ಪಕ್ಷದವರು ತಮ್ಮ ಮತಗಟ್ಟೆ ಮಟ್ಟದ ಏಜೆಂಟ್ ರನ್ನು ಕೂಡಲೇ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು. ನಗರ ಮತಕ್ಷೇತ್ರ ಸಂಬಂಧಿಸಿದಂತೆ ಮತದಾರರ ಪಟ್ಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮತದಾರರ ನೋಂದಣಾಧಿಕಾರಿಗಳು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಚುನಾವಣಾ ಆಯೋಗದ ಎಲ್ಲ ಹಂತಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡಿರುವ ಪಾರದರ್ಶಕ ಪ್ರಕ್ರಿಯೆಯಾಗಿದೆ ಎಂದು ರಾಜಕೀಯ ಪಕ್ಷಗಳಿಗೆ ತಿಳಿಸಿದರು.
ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ೩೦-೦೬-೨೦೨೬ ರಿಂದ ೨೯-೦೭-೨೦೨೬ ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ-ಮನೆ ಭೇಟಿ ಪ್ರಕ್ರಿಯೆಗಳು ನಡೆಯಲಿವೆ. ಈ ಅವಧಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಮತದಾರರ ಗಣತಿ ನಮೂನೆ ದ್ವಿ-ಪ್ರತಿಯಲ್ಲಿ ನೀಡಲಿದ್ದಾರೆ. ತಮ್ಮ ನೈಜ ಮಾಹಿತಿಯನ್ನು ಭರ್ತಿ ಮಾಡಿ ಒಂದು ಪ್ರತಿಯನ್ನು ಮತದಾರರು ಇರಿಸಿಕೊಂಡು ಸಹಿ ಮಾಡಿದ ಇನ್ನೊಂದು ಪ್ರತಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನೀಡಬೇಕು ಎಂದರು.
ದಿನಾಂಕ: ೦೫-೦೮-೨೦೨೬ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಒಂದು ವೇಳೆ ಕರಡು ಮತದಾರರ ಪಟ್ಟಿಯಲ್ಲಿ ನ್ಯೂನ್ಯತೆಗಳು ಕಂಡು ಬಂದಲ್ಲಿ ನೈಜ ಮತದಾರರಿಗೆ ತಮ್ಮ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸೆಪ್ಟೆಂಬರ್ ೪ರೊಳಗಾಗಿ ಸಲ್ಲಿಸಲು ಅವಕಾಶವಿದೆ ಎಂದರು.
ದಿನಾಂಕ: ೦೫-೦೮-೨೦೨೬ ರಿಂದ ೦೩-೧೦-೨೦೨೬ ರವರೆಗೆ ನೋಟಿಸ್ ಹಂತ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಕಾರ್ಯ ಕೈಗೊಳ್ಳಲಾಗುವುದು. ಈ ಹಂತದಲ್ಲಿ ಆಕ್ಷೇಪಣೆ ಸಲ್ಲಿಸಿದ ಮತದಾರರು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದ ೧೨ ದಾಖಲೆಗಳ ಪೈಕಿ ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದು. ಮತದಾರರ ಹೆಸರನ್ನು ನಿಯಮಾನುಸಾರ ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ಜರುಗಿಸಲಾಗುವುದು.ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ ೭ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಪರಿಷ್ಕರಣೆ ಕಾರ್ಯದಲ್ಲಿ ಮತದಾರರು ಸುಗಮವಾಗಿ ಭಾಗವಹಿಸಲು ಸಾಧ್ಯವಾಗುವಂತೆ ಬಿಎಲ್‌ಒ ಫೆಸಿಲಿಟೇಶನ್ ಕ್ಯಾಂಪ್ ಹಾಗೂ ವೋಟರ್ ಫೆಲಿಸಿಟೇಶನ್ ಕ್ಯಾಂಪ್ ಗಳನ್ನು ಸ್ಥಾಪಿಸಲಾಗುವುದು ಎಂದವರು ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಣೆ ಹಾಗೂ ಸಂಗ್ರಹಿಸುವ ಸಂದರ್ಭದಲ್ಲಿ ಎಲ್ಲ ಮತದಾರರು, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಅವರು ಹೇಳಿದರು.

