ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮತದಾರರ ಪಟ್ಟಿ ಪರಿಷ್ಕರಿಸಲು ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಮತದಾರರು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಲು ಮುಂದಾಗಬೇಕು. ಯಾವುದೇ ಅನಗತ್ಯ ಭಯ ಬೇಡ ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ರ ಕುರಿತಾದ ಮಾಧ್ಯಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ೭೫.೪೦ ಮ್ಯಾಪಿಂಗ್ ಮತ್ತು ೧೧೮.೯೮ ಪ್ರೋಜಣಿ ಆಗಿದ್ದು ಒಟ್ಟು ೯೫.೦೫ ಫಲಿತಾಂಶ ಬಂದಿದೆ. ಇದೇ ದಿ:೨೦ ರಿಂದ ೨೯ ರವರೆಗೆ ಬಿಎಲ್‌ಓ ಮತ್ತು ಬಿಎಲ್‌ಎ ತರಬೇತಿ ಮತ್ತು ರಾಜಕೀಯ ಮುಖಂಡರ ಸಭೆ ಜರುಗಲಿವೆ. ನಂತರ ಇದೇ ದಿ:೩೦ ರಿಂದ ಜುಲೈ ೨೯ ರವರೆಗೆ ಬಿಎಲ್‌ಓ ಗಳು ಪ್ರತಿ ಮನೆಗೆ ತೆರಳಿ ನಮೂನೆ ಅನುಭಂಧ ೩ ನೀಡಿ ಅವರಿಂದ ಆಯೋಗ ಸೂಚಿಸಿದ ೧೨ ದಾಖಲೆಗಳಲ್ಲಿ ಒಂದನ್ನು ಪಡೆಯುತ್ತಾರೆ.
ಮತದಾರರು ಘೋಷಣಾ ನಮೂನೆಯಲ್ಲಿ ವಿವರಗಳನ್ನು ಒದಗಿಸಲು ಸಂಬಂಧಪಟ್ಟ ಬಿಎಲ್‌ಓ ಗಳನ್ನು ಸಂಪರ್ಕಿಸಬಹುದಾಗಿದೆ. ಘೋಷಣಾ ನಮೂನೆಯಲ್ಲಿ ಒದಗಿಸಲಾದ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದಿದ್ದರೇ ಅಥವಾ ಹೊಂದಿಕೆಯಾಗದಿದ್ದರೆ ಅಂತಹ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ.
ಮತದಾರರು ನೋಟಿಸನ್ನು ಪಡೆದ ನಂತರ ಅದಕ್ಕೆ ಸಂಬಂಧಿತ ಈ ಕೆಳಗಿನ ಅಗತ್ಯ ದಾಖಲೆಗಳಾದ ೧೯೮೭ ಜುಲೈ ೧ ರ ಮುಂಚೆ ದೇಶದಲ್ಲಿ ಜನಿಸಿದವರು ಜನ್ಮ ದಿನಾಂಕ ಅಥವಾ ಜನ್ಮಸ್ಥಳದ ದಾಖಲೆ. ೧೯೮೭ ಜುಲೈ ೧ ಮತ್ತು ೨೦೦೪ ರ ಡಿಸೆಂಬರ್ ೨ ರ ನಡುವೆ ದೇಶದಲ್ಲಿ ಜನ್ಮ ತಾಳಿದ್ದರೆ ಜನ್ಮ ದಿನಾಂಕ ಅಥವಾ ಜನ್ಮಸ್ಥಳ ದಾಖಲೆ. ತಂದೆ ಅಥವಾ ತಾಯಿಗೆ ಸಂಬಂಧಿಸಿದ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ದಾಖಲೆಗಳು. ಅಲ್ಲದೆ ಕೇಂದ್ರ, ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ, ಉದ್ಯಮದ ಗುರುತಿನ ಚೀಟಿ, ನಿವೃತ್ತಿ ವೇತನ ಸಂದಾಯ ಆದೇಶಪತ್ರ, ಬ್ಯಾಂಕ್, ಅಂಚೆಕಚೇರಿ, ಎಲ್‌ಐಸಿ, ನೀಡಿರುವ ಪ್ರಮಾಣಪತ್ರ ಅಥವಾ ಗುರುತಿನ ಚೀಟಿಗಳು. ಪಾಸ್‌ಪೋರ್ಟ್. ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರ, ಜಮೀನು ಹಾಗೂ ಮನೆಹಂಚಿಕೆ ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ನೀಡುವುದರ ಮೂಲಕ ರುಜುವಾತ ಪಡಿಸಬೇಕಾಗುತ್ತದೆ.
ಸಾರ್ವಜನಿಕರು ಎಸ್‌ಐಆರ್ ಮತ್ತು ದಾಖಲೆಗಳ ಕುರಿತು ಯಾವುದೇ ಸುಳ್ಳು ಸುದ್ದಿಗಳನ್ನು ನಂಬುವುದು ಹಾಗೂ ಹರಡದೇ ಸಂಬಂಧಿತ ದಾಖಲೆಗಳ ಮೂಲಕ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ ಸುರೇಶ ಮ್ಯಾಗೇರಿ ಹಾಗೂ ಸಿಬ್ಬಂದಿ ಇದ್ದರು.

