ಇಂಡಿಯಲ್ಲಿ ಗಾಣಿಗ ಸಮಾಜದ ಮುಖಂಡರಿಂದ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗಾಣಿಗ ಸಮಾಜದ ಮುಖಂಡರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಗಾಣಿಗ ಸಮಾಜದ ತಾಲೂಕಾ ಅಧ್ಯಕ್ಷ ಎ.ಎಸ್. ಗಾಣಿಗೇರ ಮಾತನಾಡಿ, ಗಾಣಿಗ ಸಮುದಾಯದ ರಾಜ್ಯಮಟ್ಟದ ನಾಯಕರು ಹಾಗೂ ಬೆಳಗಾವಿಯ ಹಿರಿಯ ಶಾಸಕರಾದ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರ ಪರಿಣಾಮವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಭಾಗಗಳಲ್ಲಿ ೨೫ಕ್ಕೂ ಹೆಚ್ಚು ಸ್ಥಾನವನ್ನು ಕಾಂಗ್ರೇಸ್ ಪಕ್ಷ ಗೆಲ್ಲಲು ಸಾಧ್ಯವಾಗಿದೆ. ಬಿಜೆಪಿ ತೊರೆದು ಕಾಂಗ್ರೇಸ್ ಸೇರುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ ಅವರು ನಮ್ಮ ಸರಕಾರ ರಚನೆಯಾಗುವ ಸಂದರ್ಭದಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ತಿಳಿಸಿದ್ದರು. ಹೀಗಾಗಿ ಈಗ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ಅವರನ್ನು ಬರುವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದು, ಜಾತ್ಯತೀತ ನಾಯಕರಾಗಿದ್ದಾರೆ. ಅವರ ಹಿರಿತನ ಹಾಗೂ ಅವರ ದೂರ ದೃಷ್ಟಿ, ಅಭಿವೃದ್ಧಿಗೆ ಕಾರ್ಯಗಳು, ಇವೆಲ್ಲವುಗಳನ್ನು ಮನಗಂಡು ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಎಂದರು.
ಸಮಾಜದ ಮುಖಂಡ ಸುಭಾಸ ಹಿಟ್ನಳ್ಳಿ, ಬಿ.ಎಸ್.ಅವಜಿ ಮಾತನಾಡಿ, ಹಿರಿಯ ನಾಯಕರಾದ ಲಕ್ಷ್ಮಣ ಸವದಿ ಅವರ ಅನುಭವ ಮತ್ತು ನಾಯಕತ್ವವನ್ನು ಪರಿಗಣಿಸಿ ಅವರಿಗೂ ಸರಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಗಾಣಿಗ ಸಮಾಜವು ದೊಡ್ಡ ಸಂಖ್ಯೆಯಲ್ಲಿದ್ದು, ರಾಜಕೀಯವಾಗಿ ಸಮಾಜಕ್ಕೆ ಪ್ರಾತಿನಿಧ್ಯ ನೀಡುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಅಪ್ಪು ಕಲ್ಲೂರ, ಮಲಕಣ್ಣ ಜಂಬಗಿ, ಭೀಮನಗೌಡ ಪಾಟೀಲ, ಪ್ರದೀಪ ಉಟಗಿ ಇದ್ದರು.

