ಉದಯರಶ್ಮಿ ದಿನಪತ್ರಿಕೆ
ಅಥಣಿ: ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಎಫ್‌ಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ ಕೆಂಪವಾಡ ಅವರನ್ನು ತಾಲೂಕಾ ಆಡಳಿತದ ವತಿಯಿಂದ ಸೋಮವಾರ ಸನ್ಮಾನಿಸಿ ಸತ್ಕರಿಸಲಾಯಿತು.
ಅಥಣಿ ತಹಶೀಲ್ದಾರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ ಸಿದರಾಯ ಬೋಸಗಿ ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಸೇರಿ ಬಸವರಾಜ ಕೆಂಪವಾಡ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಕೆಂಪವಾಡ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಯುಪಿಎಸ್‌ಸಿ ಐಎಫ್‌ಎಸ್‌ಸಿ ಅಂತಹ ಪರೀಕ್ಷೆಗಳನ್ನು ಪಾಸ ಮಾಡುವುದು ಕಷ್ಟವಲ್ಲ ನನ್ನ ಯಶಸ್ಸಿಗೆ ನನ್ನ ತಂದೆ ತಾಯಿ ಗುರುಗಳು ಮತ್ತು ಅಥಣಿ ತಾಲೂಕಿನ ಜನರ ಆಶೀರ್ವಾದವೇ ಕಾರಣ ಸಾದ್ಯವಾದಷ್ಟು ಸಮಜಾಜಕ್ಕೆ ಒಳ್ಳೆದೆ ಮಾಡುವೆ ನಿಮ್ಮಂತ ಎಲ್ಲ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮುಂದೆ ಅರಣ್ಯ ಇಲಾಖೆಯಲ್ಲಿ ಒಳ್ಳೆಯ ಸೇವೆ ಸಲ್ಲಿಸುವ ಮೂಲಕ ಪರಿಸರ ಸಂರಕ್ಷಣೆಗೆ ನನ್ನ ಕೊಡುಗೆ ನೀಡುವೆ ಎಂದು ಹೇಳಿದರು.
ತಹಶೀಲ್ದಾರ ಸಿದರಾಯ ಬೋಸಗಿ ಮಾತನಾಡಿ, ಬಸವರಾಜ ಕೆಂಪವಾಡ ಅವರು ಐಎಫ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಇಡಿ ಅಥಣಿ ತಾಲೂಕಿಗೆ ಹಾಗೂ ಸವದಿ ಗ್ರಾಮಕ್ಕೆ ಹೆಮ್ಮೆಯ ವಿಷಯ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಕಠಿಣ ಪರಿಶ್ರಮ ಛಲ ಇದ್ದರೆ ಯಾವುದೇ ಗುರಿ ಮುಟ್ಟಲು ಸಾಧ್ಯ ಎಂಬುದನ್ನು ಬಸವರಾಜ ಕೆಂಪವಾಡ ಅವರು ತೋರಿಸಿ ಕೊಟ್ಟಿದ್ದಾರೆ ತಾಲೂಕಾ ಆಡಳಿತದಿಂದ ಪರವಾಗಿ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಿಪಿಐ ಸಂತೋಷ ಹಳ್ಳೂರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹ ಶಿವಾನಂದ ಕಲ್ಲಾಪೂರ, ಗ್ರೇಡ್ 2 ತಹಶಿಲ್ದಾರರಾದ ಬಸವರಾಜ ಹೊಸಕೇರಿ, ಮಹಾದೇವ ಬಿರಾದರ, ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಕೃಷಿ ಇಲಾಖೆಯ ನಿಂಗನಗೌಡ ಬಿರಾದರ, ದರೇಪ್ಪ ಕೆಂಪವಾಡ, ಕಂದಾಯ ಇಲಾಖೆ ಸಿಬ್ಬಂದಿ, ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

