ಅನಿತಾ ಕಾಸರಗೋಡು ಬಂಧನಕ್ಕೆ ಎಸ್ ಎನ್ ನಾಗರಾಜು ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಬಿಲ್ಲವ ಸಮಾಜ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಅನಿತಾ ಕಾಸರಗೋಡು ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು. ಆಕೆಯನ್ನು ಕೂಡಲೇ ಬಂಧಿಸಿ, ಜೈಲಿಗಟ್ಟಬೇಕು ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಆರ್ಯ ಈಡಿಗ ಸಂಘಟನಾ ಕಾರ್ಯದರ್ಶಿ ಹಾಗೂ ಈಡಿಗ ಸಮಾಜದ ಸರಗೂರು ತಾಲೂಕು ಅಧ್ಯಕ್ಷ ಎಸ್ ಎನ್ ನಾಗರಾಜು ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಎಸ್ ಎನ್ ನಾಗರಾಜು ಆಕೆಗೆ ಅನ್ಯಾಯವಾಗಿದ್ದರೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬಹುದಾಗಿತ್ತು. ಆದರೆ ಆಕೆ ಆರ್ಯ ಈಡಿಗ ಸಮಾಜ ಬಗ್ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾಳೆ. ಪ್ರಚಾರದ ಗೀಳು ಅಂಟಿಸಿಕೊಂಡು ಆಕೆ ನಮ್ಮ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾಳೆ. ಈ ಮೂಲಕ ಜಾತಿ ಜಾತಿ ನಡುವೆ ವಿಷಬೀಜ ಬಿತ್ತಿ ಶಾಂತಿ ಸೌಹಾರ್ದತೆಗೆ ಧಕ್ಕೆ ತಂದಿದ್ದಾಳೆ. ಒಂದು ಸಮಾಜದ ಬಗ್ಗೆ ಇಷ್ಟೆಲ್ಲ ಮಾತನಾಡಿರುವ ಆಕೆಯನ್ನು ಇಲ್ಲಿಯವರೆಗೆ ಬಂಧಿಸದೇ ಇರುವುದನ್ನು ನೋಡಿದರೆ ಪೋಲೀಸರ ಮೇಲೆ ಅನುಮಾನ ಶುರುವಾಗಿದೆ. ಆಕೆಯ ಹಿಂದೆ ಪ್ರಭಾವಿಗಳು ಇದ್ದು, ಪೋಲೀಸರ ಮೇಲೆ ಒತ್ತಡದ ಹೆರುವ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ರಾಜಕಾರಣಿಗಳೇ ಆಗಲಿ ಒಂದು ಸಮಾಜದ ಬಗ್ಗೆ ಕೀಳಾಗಿ ಮಾತನಾಡಿರುವ ಆಕೆಯನ್ನು ಯಾರು ಕೂಡ ಬೆಂಬಲಿಸಬಾರದು. ಆಕೆಯನ್ನು ಸುಮ್ಮನೆ ಬಿಟ್ಟರೆ ಮತ್ತೊಬ್ಬರು ಕೂಡ ಸಮಾಜ ಬಗ್ಗೆ ನಾಲಗೆ ಹರಿಬಿಡುತ್ತಾರೆ. ಆಗ ಸಮುದಾಯಗಳ ನಡುವೆ ವೈಷಮ್ಯ ಶುರುವಾಗಲಿದೆ ಎಂದು ಹೇಳಿದರು.

