ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದೊಂದಿಗೆ ಜೂನ್ 9 ರಿಂದ ಜೂನ್ 15ರ ವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸಪ್ತಾಹ ಆಯೋಜಿಸಲಾಗಿದೆ.
ಈ ಸಪ್ತಾಹದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ಆಧಾರಿತ ಕಾಯಿಲೆಗಳಾದ ಹರ್ನಿಯಾ, ಅಪೆಂಡಿಕ್ಸ್, ಹೈಡ್ರೋಸೀಲ, ಥೈರಾಯ್ಡ್, ಪಿತ್ತಕೋಶದ ಹರಳು, ಮೂಲವ್ಯಾಧಿ, ಸ್ತನದ ಗಂಟುಗಳು, ಬಾಯಿ ಮತ್ತು ಇನ್ನಿತರ ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
ಚಿಕಿತ್ಸೆ ಅಗತ್ಯವಿರುವ ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಕಾಲೇಜಿನ ಪ್ರಾಚಾರ್ಯೆ ಡಾ.ತೇಜಶ್ವಿನಿ ವಲ್ಲಭ ಮತ್ತು ಆಸ್ಪತ್ತೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗಿಗಳು ಬರುವಾಗ ತಪ್ಪದೇ ತಮ್ಮ ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್ ಅಥವಾ ಯಶಸ್ವಿನಿ ಕಾರ್ಡನ್ನು ತರಬೇಕು. ಜೂನ್ 14 ಮತ್ತು ಜೂನ್ 15 ರಂದು ರಕ್ತದಾನ ಶಿಬಿರ ನಡೆಯಲಿದೆ.
ಜೂನ. 15 ರಂದು ಮಧ್ಯಾಹ್ನ 3 ರಿಂದ 5ರ ವರೆಗೆ ಕ್ವಿಜ್ ಮಾಸ್ಟರ್ ಡಾ. ದೀಪಕ ಚವ್ಹಾಣ ನೇತೃತ್ವದಲ್ಲಿ ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ “ಸರ್ಜಿಕ್ವಿಜ್” ಸ್ಪರ್ಧೆ ಆಯೋಜಿಸಲಾಗಿದೆ.
