ವಿಜಯಪುರದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕಾರ್ಯವನ್ನು ಯಶಸ್ವಿಗೊಳಿಸಲು ಮತ್ತು ಆರೋಗ್ಯಯುತ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ನಿಯಮಾನುಸಾರ ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕುರಿತು ಜಿಲ್ಲೆಯ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕಾರ್ಯ ಜೂ.೨೦ ರಿಂದ ಪ್ರಾರಂಭವಾಗಲಿದ್ದು, ಅಷ್ಟರೊಳಗಾಗಿ, ಜಿಲ್ಲೆಯ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವುದು ಅತಿ ಅವಶ್ಯಕವಾಗಿದ್ದು, ಇದರ ಪೂರ್ವಭಾವಿಯಾಗಿ ತಾಲೂಕಾವಾರು ತರಬೇತುದಾರರಿಗೆ ತರಬೇತಿಯನ್ನು ಏರ್ಪಡಿಸಲಾಗಿದೆ ಎಂದ ಅವರು, ಇಲ್ಲಿ ಪೂರ್ಣ ಪ್ರಮಾಣದ ತರಬೇತಿ ಪಡೆದುಕೊಂಡು ಪರಿಣಾಮಕಾರಿಯಾಗಿ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿಯನ್ನು ನೀಡಬೇಕು ಎಂದರು. ೨೦೦೨ರ ಮತದಾರರ ಪಟ್ಟಿಯನ್ನು ೨೦೨೫ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಕಾರ್ಯ ಕೈಗೊಳ್ಳುವ ಕುರಿತು ಈಗಾಗಲೇ ಹಲವಾರು ಬಾರಿ ವಿಡಿಯೋ ಸಂವಾದಗಳ ಮೂಲಕ ಮತ್ತು ಸಭೆಗಳನ್ನು ಜರುಗಿಸುವುದರ ಮೂಲಕ ಮತ್ತು ಪತ್ರಗಳ ಮೂಲಕ ನಿಮಗೆ ಸೂಚಿಸಲಾಗಿದ್ದು, ಮ್ಯಾಪಿಂಗ್ ಕಾರ್ಯವು ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಅತೀ ಮಹತ್ವಾದ್ದಾಗಿದ್ದು, ಈ ನಿಟ್ಟಿಯಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಶೇ.೯೦ ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದರು.
ಜಿಲ್ಲೆಯ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲು,ಬಿಎಲ್‌ಒ ಫೆಸಿಲೇಶನ್ ಕೇಂದ್ರ ಮತ್ತು ಮತದಾರರ ಫೆಸಿಲಿಟೇಶನ್ ಕೇಂದ್ರಗಳನ್ನು ಸ್ಥಾಪಿಸಲು, ರಾಜಕೀಯ ಪಕ್ಷಗಳ ಸಭೆ ಕರೆದು ಅವರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ತಿಳುವಳಿಕೆ ನೀಡಬೇಕು ಎಂದರು, ಮತಗಟ್ಟೆ ಅಧಿಕಾರಿಗಳಿಗೆ ನೀಡಿದ ಗಣತಿ ಫಾರ್ಮ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಹಿಂದಿರಿಗಿಸಿದ ಬಗ್ಗೆ ಪರಿಶೀಲಿಸಲು ಮತ್ತು ಹಿಂದಿರುಗದ ಗಣತಿ ಫಾರ್ಮಗಳ ಕುರಿತು ವಿಚಾರಣೆಯನ್ನು ಕೈಗೊಳ್ಳಲು ಮತ್ತು ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಪೂರ್ವದಲ್ಲಿ ಅವಶ್ಯಕ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ಎಲ್ಲ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಮತಕ್ಷೇತ್ರದ ತರಬೇತುದಾರರಿಗೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರಾದ ಮಹಾವೀರ ರಜಪೂತ ಹಾಗೂ ಆರ್.ಸಿ. ಹಿರೇಮಠ ಅವರು ತರಬೇತಿ ನೀಡಿದರು.
ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಔದ್ರಾಮ, ಮತದಾರರ ನೋಂದಣಾಧಿಕಾರಿಗಳಾದ ಮ ರಾಜಶೇಖರ ಡಂಬಳ, ವಿನಯ ಪಾಟೀಲ, ಗುರುನಾಥ ದಡ್ಡೆ, ಚಿದಾನಂದ ಗುರುಸ್ವಾಮಿ ಸೇರಿದಂತೆ ವಿಜಯಪುರ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲೆಯ ಎಲ್ಲ ತಹಶೀಲದಾರರು ಮತ್ತು ಮತಕ್ಷೇತ್ರದ ತರಬೇತುದಾರರು ಹಾಜರಿದ್ದರು.

