ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ. ಯಾವುದೇ ಕಾರಣಕ್ಕೂ ರೈತ ಬಾಂಧವರು ಆತಂಕ ಪಡದೇ ಸಕಾಲಿಕವಾಗಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಬೀಜ ವೀಕ್ಷಿಸಿ ಕೆಲ ರೈತ ಬಾಂಧವರಿಗೆ ಬೀಜ ವಿತರಣೆ ಮಾಡಿದ ನಂತರ ಮಾತನಾಡಿದ ಅವರು, ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಬೀಜೋಪಚಾರ ಮಾಡಬೇಕು. ತೊಗರಿ ಬೆಳೆಯಲ್ಲಿ ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ, ಹೆಸರು,ಶೇಂಗಾ ಹಾಗೂ ಉದ್ದು ಬೆಳೆಗಳನ್ನು ಅಂತರ ಬೆಳೆಯನ್ನಾಗಿ ಬೆಳೆಯಬೇಕು. ಹತ್ತಿಯ ಬೆಳೆಯಲ್ಲಿ ತೊಗರಿ ಬೆಳೆಯನ್ನು ಕಾವಲು ಬೆಳೆಯನ್ನಾಗಿ ಬೆಳೆಯಬೇಕು. ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ. ಪಲ್ಸ ಮ್ಯಾಜಿಕ ಹಾಗೂ ಪಲ್ಸ ಬೂಸ್ಟರ್ ಇತ್ಯಾದಿಗಳನ್ನು ಬಳಕೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಸಮತೋಲಿತ ಗೊಬ್ಬರ ಬಳಕೆ ಮಾಡಬೇಕೆಂದು ರೈತ ಬಾಂಧವರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಪಿ.ಬಿರಾದಾರ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗಾಯತ್ರಿ ಶಿಂಧೆ, ಕೃಷಿ ಸಮಾಜದ ಸದಸ್ಯ ಸಿದ್ರಾಮಪ್ಪ ಉಪ್ಪಿನ, ಕೃಷಿ ಸಿಬ್ಬಂದಿ ಇತರರು ಇದ್ದರು.
ನಂತರ ಕೃಷಿ ಪರಿಕರ ಮಳಿಗೆಗೆ ಭೇಟಿ ನೀಡಿ ಕೃಷಿ ಪರಿಕರ ಮಾರಾಟಗಾರರಿಗೆ ಕೆ ಕಿಸಾನ್ ತಂತ್ರಾಂಶ ಮತ್ತು ಪಾಸ್ ಮಶೀನ್ ಮೂಲಕ ಯೂರಿಯಾ ವಿತರಣೆ ಮಾಡಬೇಕೆಂದು ಸೂಚಿಸಿದ ಅವರು ಗೊಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡದೇ ನಿಗದಿತ ಬೆಲೆಯಲ್ಲಿ ಮಾರಾಟ ಮಾಡಬೇಕು. ಒಂದು ವೇಳೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವದು ಕಂಡುಬಂದರೆ ಅಂತಹವರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

