ಉದಯರಶ್ಮಿ ದಿನಪತ್ರಿಕೆ
ಚಡಚಣ: ದೇಶಸೇವೆ ಕೇವಲ ಒಂದು ಉದ್ಯೋಗವಲ್ಲ, ಅದು ರಾಷ್ಟ್ರ ರಕ್ಷಣೆಯ ಪವಿತ್ರ ಜವಾಬ್ದಾರಿ ಎಂಬ ಧ್ಯೇಯದೊಂದಿಗೆ ಭಾರತೀಯ ಸೇನೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ವೀರಯೋಧ ಸುಬೇದಾರ್ ಭೀಮಾಶಂಕರ ಗರುಲಿಂಗಪ್ಪ ಸರಸಂಬಿ ಅವರಿಗೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
1996ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಭೀಮಾಶಂಕರ ಸರಸಂಬಿ ಅವರು ಸುಮಾರು 30 ವರ್ಷಗಳ ಕಾಲ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪಂಜಾಬ್, ಮಹಾರಾಷ್ಟ್ರ, ನಾಗಾಲ್ಯಾಂಡ್, ಝಾನ್ಸಿ, ಪಠಾಣಕೋಟ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿ ದೇಶದ ಭದ್ರತೆಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ನಿವೃತ್ತಿಯ ನಂತರ ತಮ್ಮ ತಾಯಿನಾಡಿಗೆ ಆಗಮಿಸಿದ ಅವರನ್ನು ಬರಡೋಲ ಗ್ರಾಮಸ್ಥರು ಹಾಗೂ ಬರಡೋಲ ಗ್ರಾಮದ ಮಾಳಿ ಸಮಾಜದವರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹೃತ್ಪೂರ್ವಕವಾಗಿ ಬರಮಾಡಿಕೊಂಡರು.
ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಮಹಾತ್ಮ ಜ್ಯೋತಿಬಾ ಫುಲೆ ಮಂಗಲ ಕಾರ್ಯಾಲಯದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ದೇಶಭಕ್ತಿ ಗೀತೆಗಳು, ಘೋಷಣೆಗಳು ಹಾಗೂ ಪುಷ್ಪವೃಷ್ಟಿಯ ನಡುವೆ ನೂರಾರು ಗ್ರಾಮಸ್ಥರು, ಮಾಜಿ ಸೈನಿಕರು, ಯುವಕರು ಮತ್ತು ಮಾಳಿ ಸಮಾಜದ ಮುಖಂಡರು ವೀರಯೋಧರನ್ನು ಗೌರವಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದೇಶಸೇವಕನಿಗೆ ಅಪೂರ್ವ ಸನ್ಮಾನ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮಾಶಂಕರ ಸರಸಂಬಿ, “ಭಾರತ ಮಾತೆಯ ಸೇವೆ ಮಾಡಲು ಅವಕಾಶ ದೊರೆತಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಭಾಗ್ಯ. ದೇಶಕ್ಕಾಗಿ ಸೇವೆ ಸಲ್ಲಿಸಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರತಿಯೊಂದು ಕುಟುಂಬದಲ್ಲೂ ಒಬ್ಬ ಸೈನಿಕ ಇರಬೇಕು ಎಂಬುದು ನನ್ನ ಆಶಯ. ಮುಂದಿನ ದಿನಗಳಲ್ಲಿ ರೈತನಾಗಿ ಸಮಾಜದೊಂದಿಗೆ ಬೆರೆತು ಸೇವೆ ಸಲ್ಲಿಸಲು ಬಯಸಿದ್ದೇನೆ” ಎಂದು ಹೇಳಿದರು.
ಚಡಚಣ ತಾಲೂಕಿನ ಜಿಗಜೇವಣಿ ಗ್ರಾಮದ ಮೂಲ ನಿವಾಸಿಯಾಗಿರುವ ಭೀಮಾಶಂಕರ ಸರಸಂಬಿ ಅವರ ಪತ್ನಿ ಗೀತಾಂಜಲಿ. ಇವರಿಗೆ ಪೂಜಾ, ಪುಷ್ಪಾಂಜಲಿ ಎಂಬ ಇಬ್ಬರು ಪುತ್ರಿಯರು ಹಾಗೂ ಗುರುರಾಜ ಎಂಬ ಪುತ್ರನಿದ್ದಾನೆ. ವಿಶೇಷವೆಂದರೆ ಗುರುರಾಜ ಅವರು ಇದೇ ತಿಂಗಳ 23ರಂದು ಭಾರತೀಯ ಸೇನೆಗೆ ಸೇರ್ಪಡೆಯಾಗಲಿದ್ದು, ಕುಟುಂಬದ ದೇಶಸೇವೆಯ ಪರಂಪರೆ ಮುಂದುವರಿಯಲಿದೆ.
ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಅಧ್ಯಕ್ಷ ಭೀಮಣ್ಣ ಮೇತ್ರಿ, ಅರ್ಜುನ ಮೇತ್ರಿ, ಶ್ರೀಶೈಲ ಮೇತ್ರಿ, ಶಿವಾನಂದ ಮೇತ್ರಿ, ಶ್ರೀಕಾಂತ ಮೇತ್ರಿ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಚಡಚಣ ತಾಲೂಕಿನ ಮಾಜಿ ಸೈನಿಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಾಶಂಕರ್ ಸರಸಂಬಿ, “ನನಗೆ ನೀಡಿದ ಈ ಅದ್ದೂರಿ ಸ್ವಾಗತ ಮತ್ತು ಗೌರವವನ್ನು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ” ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

