ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಾನೂನು ಬಾಹಿರವಾಗಿ ನಡೆದಿರುವ ನೇಮಕಾತಿ ರದ್ದುಪಡಿಸಬೇಕು, ೨೦೧೭-೧೮ ನೇ ಸಾಲಿನ ರೈತರ ಸಾಲ ಮನ್ನಾ ಮೊತ್ತದಲ್ಲಿ ದುರ್ಬಳಕೆ ಮಾಡಿಕೊಂಡಿರುವ ಕಾರ್ಯ ನಿರ್ವಾಹಕ ಅಧಿಕಾರಿ ಮಳಸಿದ್ದ ಚಪ್ಪಳಗಾಂವ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಹಿರೇ ಬೇವನೂರ ಗ್ರಾಮದ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡ ವಿಜಯಕುಮಾರ ಬಿರಾದಾರ, ಅಯ್ಯನಗೌಡ ಬಿರಾದಾರ ಮಾತನಾಡಿ, ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸತೀಶ ಮಳಸಿದ್ದ ಚಪ್ಪಳಗಾಂವ ಅವರನ್ನು ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ನೇಮಕಾತಿ ಮಾಡಿಕೊಳ್ಳುವ ಮುನ್ನ ಎಲ್ಲಾ ಶೇರುದಾರರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಬೇಕಾಗಿತ್ತು. ಆದರೆ ಅದು ನಡೆದಿಲ್ಲ. ಆ ಕಾರಣಕ್ಕಾಗಿ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ನಿರ್ದೇಶಕ ಮಂಡಳಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಎರಡು ದಿನದಲ್ಲಿ ಆಡಳಿತ ಮಂಡಳಿಯವರು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಂಡ ಸಿಬ್ಬಂದಿಯನ್ನು ತೆಗೆಯಬೇಕು. ಈಗಾಗಲೆ ಸಹಾಯಕ ಉಪನಿಬಂಧಕರಿಗೆ ಈ ಕುರಿತು ತಿಳಿಸಲಾಗಿದೆ. ಸಮಸ್ಯೆ ಇತ್ಯರ್ಥವಾಗದೇ ಹೋದಲ್ಲಿ ಇಂಡಿ ತಾಲೂಕಾಡಳಿತದ ಮುಂದೆ ಧರಣಿ ನಡೆಸಲಾಗುವುದು.
ಅಯ್ಯನಗೌಡ ಬಿರಾದಾರ, ಹಿರೇಬೇವನೂರ ಗ್ರಾಮಸ್ಥ.
ಪ್ರತಿಭಟನೆಯಲ್ಲಿ ಪ್ರಕಾಶ ಬಿರಾದಾರ, ಆಕಾಶ ಪಾಟೀಲ, ಸಂಗಪ್ಪ ಭಾಸಗಿ, ಪ್ರಶಾಂತ ಬಿರಾದಾರ, ಶಿವರಾಯ ಬಿರಾದಾರ, ಪ್ರವೀಣ ಉಪ್ಪಿನ, ಅಶೋಕ ಬಿರಾದಾರ, ಮುತ್ತು ಬಿರಾದಾರ ಮಳಸಿದ್ದ ಗಜಾಕೋಶ ಸೇರಿದಂತೆ ಸಂಘದ ಶೇರುದಾರರು ಭಾಗಿಯಾಗಿದ್ದರು.

