ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರ ಹಾಗೂ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ರಸಗೊಬ್ಬರ ಹಾಗೂ ಬೀಜಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಬೇಕು ಹಾಗೂ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತರು ಸಹಾಯಕ ಕೃಷಿ ಅಧಿಕಾರಿ ಶರಣಗೌಡ ಬಿರಾದಾರರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಸೋಮವಾರ ಆಗಮಿಸಿದ ರೈತರು ಮುಂಗಾರು ಬಿತ್ತನೆಗೆ ಅಗತ್ಯವಾದ ಬೀಜ, ರಸಗೊಬ್ಬರಗಳ ಕುರಿತು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ಕೃಷಿ ಮಳಿಗೆಗಳ ಮಾರಾಟಗಾರರು ರೈತರಿಗೆ ಉತ್ತಮ ಸಲಹೆಯೊಂದಿಗೆ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಬೇಕು ಹಾಗೂ ಕಡ್ಡಾಯವಾಗಿ ರಶೀದಿ ನೀಡಬೇಕು. ಈ ಸಂದರ್ಭದಲ್ಲಿ ಕೃತಕ ಅಭಾವ ಸೃಷ್ಟಿಸುವುದು, ದರಗಳಲ್ಲಿ ವ್ಯತ್ಯಾಸ ಮಾಡುವಂತ ಚಟುವಟಿಕೆಗಳು ಹಾಗೂ ಮುಖ್ಯವಾಗಿ ದೂರುಗಳು ಕಂಡು ಬಂದಲ್ಲಿ ಮಾರಾಟಗಾರರ ವಿರುದ್ಧ ದೂರು ನೀಡಲಾಗುವುದು ಎಂದು ಎಚ್ಚರಿಸಿ ಸಹಾಯಕ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದು ಆನಂದಿ, ಉಪಾಧ್ಯಕ್ಷ ಎಂ.ಡಿ.ಕಣಮೇಶ್ವರ, ನಿರ್ದೇಶಕರಾದ ವಿಠ್ಠಲ ಕನ್ನೋಳ್ಳಿ, ಸಾಹೇಬಗೌಡ ಉತ್ನಾಳ, ಮಹಾದೇವಪ್ಪ ಹರವಾಳ ಚಂದ್ರಕಾಂತ ಪ್ಯಾಟಿ, ಅಜೀಜ್ ಯಲಗಾರ, ರಾಚೋಟಯ್ಯ ಹಿರೇಮಠ, ರಾಮು ದೇಸಾಯಿ, ಈರಣ್ಣ ಒಂಟೆತ್ತೀನ, ಕರಭಂಟನಾಳ(ಪಡಗಾನೂರ) ಇದ್ದರು.

