ಸಾರಿಗೆ ಇಲಾಖೆ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೃತ್ತಿಧರ್ಮದ ಜೊತೆಗೆ ಸಮಾಜಮುಖಿ ಚಿಂತನೆ ಮೂಲಕ ಕಾರ್ಯ ನಿರ್ವಹಿಸಿದರೆ ಆತ್ಮತೃಪ್ತಿ ಇರುತ್ತದೆ. ಈ ನಿಟ್ಟಿನಲ್ಲಿ ಹುಟ್ಟೂರಿನ ಋಣ ತೀರಿಸುವ ಕಾರ್ಯ ಮಾಡೋಣ ಎಂದು ಸಾರಿಗೆ ಇಲಾಖೆ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಹೇಳಿದರು.
ವಿಜಯಪುರದಲ್ಲಿ ಚಿಕ್ಕರೂಗಿ ನೌಕರರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲ ಗ್ರಾಮೀಣ ಪ್ರದೇಶದಿಂದ ಬಂದಿದ್ದೇವೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ನೌಕರರೆಲ್ಲ ಸೇರಿಕೊಂಡು ಸಹಕಾರ ನೀಡುವ ಕಾರ್ಯ ಮಾಡೋಣ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡೋಣ ಎಲ್ಲರೂ ಸಹಕಾರ ನೀಡಬೇಕೆಂದರು.
ಅಮ್ಮ ಫೌಂಡೇಶನ್ ಗೌರವಾಧ್ಯಕ್ಷ ಯು ಐ ಶೇಖ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಬದುಕಿನಲ್ಲಿ ಒತ್ತಡಗಳು ಹೆಚ್ಚಾಗುತ್ತಿದೆ. ಯಾರಿಗೂ ಸಮಯವಿಲ್ಲದಂತಾಗಿದೆ. ಇಂತಹದರಲ್ಲಿ ಚಿಕ್ಕರೂಗಿ ನೌಕರರೆಲ್ಲರೂ ಒಂದೆಡೆ ಸೇರಿಕೊಂಡು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇವರು ಎಲ್ಲರಿಗೂ ಮಾದರಿಯಾಗಿದ್ದು, ಮುಂಬರುವ ದಿನಗಳಲ್ಲಿ ನೌಕರರೆಲ್ಲ ಸೇರಿ ಸಮಾಜಮುಖಿ ಚಟುವಟಿಕೆಗಳನ್ನು ಮಾಡಿ ತಮ್ಮ ಸೇವಾ ಋಣವನ್ನು ತೀರಿಸುವ ಕಾರ್ಯವಾಗಲಿ ಎಂದು ಶುಭ ಕೋರಿದರು.
ರೇಶ್ಮೆ ಇಲಾಖೆಯ ತಾಲೂಕು ಅಧಿಕಾರಿ ಬಾಬುಗೌಡ ಬಿರಾದಾರ, ಇಂಜಿನಿಯರ್ ಎಸ್ ಎಂ ಕಲಬುರಗಿ, ಪ್ರಾಧ್ಯಾಪಕ ಡಾ. ಬಿ ಎಂ ಕೋರಬು, ಶಿಕ್ಷಕರಾದ ಎಮ್ ಎಲ್ ಖೋಜಗೀರ, ಐ ಆರ್ ಸಾರವಾಡ, ಎಸ್ ಎಸ್ ಇನಾಮದಾರ, ಪೊಲೀಸ್ ಇಲಾಖೆಯ ಅಜೀತ ಬಿರಾದಾರ ಮಾತನಾಡಿದರು.
ಸಮಾರಂಭದಲ್ಲಿ ಚಿಕ್ಕರೂಗಿ ನೌಕರರ ಗೆಳೆಯರ ಬಳಗದ ವತಿಯಿಂದ ವಿಬಾಗೀಯ ನಿಯಂತ್ರಣಾಧಿಕಾರಿಯಾಗಿ ಜಿಲ್ಲೆಗೆ ಆಗಮಿಸಿದ ದೇವಾನಂದ ಬಿರಾದಾರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಬೂಲ್ ಕೊಕಟನೂರ ಹಾಗೂ ಮಹಾನಗರ ಪಾಲಿಕೆಗೆ ವರ್ಗಾವಣೆಯಾಗಿ ಬಂದ ಎಸ್ ಎಮ್ ಕಲಬುರಗಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನ್ಯಾಯವಾದಿ ಎಂ ಕೆ ನದಾಫ, ನಾಗಠಾಣ ಕೆಪಿಎಸ್ ಕಾಲೇಜಿನ ಪ್ರಾಚಾರ್ಯ ಹುಸೇನ್ ಹಳ್ಳಿ, ನಿವೃತ್ತ ಅಧಿಕಾರಿ ಸೊಮಣ್ಣ ಮದಭಾವಿ, ಸಾರಿಗೆ ಇಲಾಖೆ ಅಧಿಕಾರಿ ಬನಸೋಡೆ, ಬಿ ವ್ಹಿ ಚಂಡಕಿ, ಅಲ್ತಾಫ ಸಾಲೋಟಗಿ, ಡಿ ಎಂ ನದಾಫ, ಸಿದ್ದನಗೌಡ ಪಾಟೀಲ ಸೇರಿದಂತೆ ಚಿಕ್ಕರೂಗಿ ನೌಕರರ ಗೆಳೆಯರ ಬಳಗ ಉಪಸ್ಥಿತರಿದ್ದರು.

