ಓಪನ್ ಕೋರ್ಟ್ ತತ್ವಕ್ಕೆ ತಿಲಾಂಜಲಿ? | ಇತರ ಅರ್ಜಿದಾರರು, ಎದುರುದಾರರನ್ನು ಹೊರದಬ್ಬಿ ರಹಸ್ಯ ವಿಚಾರಣೆ? | ಸಾರ್ವಜನಿಕರ ಹಾಗೂ ಮಾಹಿತಿ ಹಕ್ಕು ಹೋರಾಟಗಾರರ ತೀವ್ರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ: ಚೇತನ ಶಿವಶಿಂಪಿ
ಮುದ್ದೇಬಿಹಾಳ: ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಸ್ಥಾಪಿತವಾಗಿರುವ ರಾಜ್ಯ ಮಾಹಿತಿ ಆಯೋಗದಲ್ಲೇ ಈಗ ಪಾರದರ್ಶಕತೆಯ ಕಗ್ಗೊಲೆಯಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಆಡಳಿತದ ಕತ್ತಲೆಯನ್ನು ಸರಿಸಲು ಸಾರ್ವಜನಿಕರ ಕೈಗೆ ಸಿಕ್ಕ ‘ಮಾಹಿತಿ ಹಕ್ಕು ಕಾಯ್ದೆ’ಯನ್ನು ಕಾಯುವ ಆಯೋಗವೇ, ಈಗ ವಿಚಾರಣೆಗಳನ್ನು ಮುಚ್ಚಿದ ಬಾಗಿಲಿನ ಹಿಂದೆ ನಡೆಸುವ ಮೂಲಕ ‘ಓಪನ್ ಕೋರ್ಟ್’ ತತ್ವಕ್ಕೆ ತಿಲಾಂಜಲಿ ನೀಡುತ್ತಿದೆಯೇ ಎಂಬ ಅನುಮಾನಗಳು ದಟ್ಟವಾಗಿವೆ.
ಬೆಳಗಾವಿ ಪೀಠದಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯ ಸಂದರ್ಭದಲ್ಲಿ, ಯಾವ ನಿರ್ದಿಷ್ಟ ಪ್ರಕರಣದ ವಿಚಾರಣೆ ನಡೆಯುತ್ತಿದೆಯೋ ಆ ಪ್ರಕರಣದ ಅರ್ಜಿದಾರ ಮತ್ತು ಎದುರುದಾರರನ್ನು ಮಾತ್ರ ಒಳಗೆ ಕರೆದು ವಿಚಾರಣೆ ನಡೆಸಲಾಗುತ್ತಿದೆ. ಆ ಒಂದು ಪ್ರಕರಣದ ಪ್ರಕ್ರಿಯೆ ಸಂಪೂರ್ಣ ಮುಗಿದ ಮೇಲಷ್ಟೇ ಮತ್ತೊಂದು ಪ್ರಕರಣದ ಅರ್ಜಿದಾರ ಮತ್ತು ಎದುರುದಾರರನ್ನು ಒಳಗೆ ಕರೆಯಲಾಗುತ್ತಿದ್ದು, ಅಲ್ಲಿಯವರೆಗೆ ತಮ್ಮ ಸರದಿಗಾಗಿ ಕಾಯುತ್ತಿರುವ ಬೇರೆಲ್ಲಾ ಪ್ರಕರಣಗಳ ಕಕ್ಷಿದಾರರನ್ನು ಕಡ್ಡಾಯವಾಗಿ ಹೊರಗಡೆ ಕಾಯಿಸಲಾಗುತ್ತಿದೆ. ಈ ರೀತಿಯ ‘ಒನ್ ಬೈ ಒನ್’ ರಹಸ್ಯ ಮಾದರಿಯ ಪದ್ಧತಿ ಜಾರಿಗೆ ಬಂದಿರುವುದು ಸಾರ್ವಜನಿಕರ ಹಾಗೂ ಮಾಹಿತಿ ಹಕ್ಕು ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾನೂನು ಸೂಕ್ಷ್ಮತೆ:
ಆಯೋಗಕ್ಕೆ ಮುಚ್ಚಿದ ಬಾಗಿಲ ವಿಚಾರಣೆಯ ಅಧಿಕಾರವಿದೆಯೇ?
ಕಾನೂನು ತಜ್ಞರು ಮತ್ತು ಹಿರಿಯ ವಕೀಲರ ಪ್ರಕಾರ, ಮಾಹಿತಿ ಆಯೋಗವು ಕೇವಲ ಆಡಳಿತಾತ್ಮಕ ಕಚೇರಿಯಲ್ಲ; ಅದೊಂದು ‘ಅರೆ-ನ್ಯಾಯಾಂಗ ಸಂಸ್ಥೆ’. ನ್ಯಾಯಾಲಯಗಳಂತೆಯೇ ಆಯೋಗದ ವಿಚಾರಣೆಗಳೂ ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಎಂಬುದು ನೈಸರ್ಗಿಕ ನ್ಯಾಯದ ಮೂಲ ನಿಯಮವಾಗಿದೆ.
ಆಯೋಗದ ಲೋಪ:
ಒಂದು ಪ್ರಕರಣದ ವಿಚಾರಣೆ ನಡೆಯುವಾಗ ಬೇರೆ ಪ್ರಕರಣದ ಅರ್ಜಿದಾರರು ಅಥವಾ ಎದುರುದಾರರು ಒಳಗೆ ಇರಬಾರದು ಎಂದು ನಿರ್ಬಂಧಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಇತರ ಪ್ರಕರಣಗಳಲ್ಲಿ ಅಧಿಕಾರಿಗಳು ನೀಡುವ ಉತ್ತರಗಳು, ಆಯೋಗದ ತೀರ್ಪುಗಳು ಮತ್ತು ಆಯುಕ್ತರ ಕಾನೂನು ನಿರ್ದೇಶನಗಳು ಹೇಗೆ ಮೂಡಿಬರುತ್ತವೆ ಎಂಬುದನ್ನು ಗಮನಿಸುವುದು ಕಾಯಲು ಬಂದಿರುವ ಇತರ ಅರ್ಜಿದಾರರು ಮತ್ತು ಎದುರುದಾರರ ಕಾನೂನಾತ್ಮಕ ಹಕ್ಕಾಗಿದೆ. ಈ ಪ್ರಕ್ರಿಯೆಯನ್ನು ಕಣ್ಣಾರೆ ಕಾಣದಂತೆ ತಡೆಯುವುದು ಕಾಯ್ದೆಯ ಮೂಲ ಆಶಯಕ್ಕೇ ವಿರುದ್ಧವಾಗಿದೆ.
ವಿನಾಯಿತಿ ಯಾವಾಗ?:
ದೇಶದ ಭದ್ರತೆ, ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಅತ್ಯಂತ ಗೌಪ್ಯವಾದ ವೈಯಕ್ತಿಕ ವಿಷಯಗಳಿದ್ದಾಗ ಮಾತ್ರ ನ್ಯಾಯಾಲಯ ಅಥವಾ ಆಯೋಗಗಳು ‘ಇನ್-ಕ್ಯಾಮೆರಾ’ ಅಥವಾ ಮುಚ್ಚಿದ ಬಾಗಿಲಿನ ವಿಚಾರಣೆ ನಡೆಸಬಹುದು. ಆದರೆ ಸಾಮಾನ್ಯ ಆರ್‌ಟಿಐ ಪ್ರಕರಣಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
ವಿಚಾರಣೆಗೆ ಬಂದಿದ್ದ ಅರ್ಜಿದಾರರೊಬ್ಬರು ಅಳಲು ತೋಡಿಕೊಂಡು, “ಒಳಗೆ ನಮ್ಮ ಪ್ರಕರಣದ ಎದುರಾಳಿ ಅಧಿಕಾರಿಗಳು ಏನು ವಾದ ಮಂಡಿಸುತ್ತಾರೋ, ಆಯುಕ್ತರು ಅವರಿಗೆ ಏನು ನಿರ್ದೇಶನ ನೀಡುತ್ತಾರೋ ಎಂಬುದು ಮಾತ್ರ ನಮಗೆ ತಿಳಿಯುತ್ತದೆ. ಆದರೆ, ನಮಗಿಂತ ಮುಂಚಿನ ಪ್ರಕರಣಗಳಲ್ಲಿ ಆಯೋಗವು ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕಠಿಣ ಧೋರಣೆ ತಳೆಯಿತು ಎಂಬುದನ್ನು ವೀಕ್ಷಿಸುವ ಅವಕಾಶ ನಮಗೆ ಸಿಗುತ್ತಿಲ್ಲ. ಈ ಗೌಪ್ಯತೆ ಆಯೋಗದ ಮೇಲಿನ ವಿಶ್ವಾಸವನ್ನೇ ಕುಂದಿಸುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದಂಡ ವಿಧಿಸುವಲ್ಲಿ ಆಯೋಗದ ಮೃದು ಧೋರಣೆ:
ಕೇವಲ ಶೇ. ೦.೫ ರಷ್ಟು ಪ್ರಕರಣಗಳಲ್ಲಿ ಕ್ರಮ!
ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ ೨೦ರ ಅಡಿಯಲ್ಲಿ ಮಾಹಿತಿ ನೀಡಲು ವಿಫಲರಾಗುವ ಅಥವಾ ಸುಳ್ಳು ಮಾಹಿತಿ ನೀಡುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ದಿನಕ್ಕೆ ೨೫೦ ರೂ.ನಂತೆ ಗರಿಷ್ಠ ೨೫,೦೦೦ ರೂ.ಗಳವರೆಗೆ ದಂಡ ವಿಧಿಸುವ ಕಠಿಣ ಅಧಿಕಾರ ಆಯೋಗಕ್ಕಿದೆ. ಆದರೆ ಆಯೋಗವು ಈ ಅಧಿಕಾರವನ್ನು ಬಳಸುತ್ತಿಲ್ಲ ಎಂಬ ಆರೋಪಕ್ಕೆ ಅಂಕಿ-ಅಂಶಗಳೇ ಸಾಕ್ಷಿ ನುಡಿಯುತ್ತಿವೆ.
ಲಭ್ಯವಿರುವ ಮಾಹಿತಿ ಪ್ರಕಾರ, ಆಯೋಗದ ಮುಂದೆ ವಿಚಾರಣೆಗೆ ಬಂದ ಸುಮಾರು ೧೦೦೦ ಪ್ರಕರಣಗಳ ಪೈಕಿ ಕೇವಲ ೫ ಪ್ರಕರಣಗಳಲ್ಲಿ ಮಾತ್ರ ದಂಡ ವಿಧಿಸಲಾಗಿದೆ! ಅಂದರೆ, ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿರುವುದು ಕೇವಲ ಶೇ. ೦.೫ ರಷ್ಟು ಪ್ರಕರಣಗಳಲ್ಲಿ ಮಾತ್ರ.
ಮಾಹಿತಿ ಹಕ್ಕು ಹೋರಾಟಗಾರರು, “ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ದಂಡ ವಿಧಿಸುವುದು ಅಪರೂಪವಾಗಿರುವುದರಿಂದ ಇಲಾಖೆಗಳ ಉತ್ತರದಾಯಿತ್ವ ಕುಂಠಿತವಾಗುತ್ತಿದೆ. ದಂಡದ ಭಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ” ಮತ್ತೊಂದೆಡೆ, ಪ್ರತಿ ಪ್ರಕರಣದ ಸನ್ನಿವೇಶ ವಿಭಿನ್ನವಾಗಿದ್ದು, ಎಲ್ಲ ಪ್ರಕರಣಗಳಲ್ಲೂ ದಂಡ ವಿಧಿಸಲು ಕಾನೂನು ಅವಕಾಶ ಇರುವುದಿಲ್ಲ ಎಂಬ ವಾದವೂ ಕೇಳಿಬರುತ್ತಿದೆ. ಆದಾಗ್ಯೂ, ಸಾವಿರ ಪ್ರಕರಣಗಳಿಗೆ ಹೋಲಿಸಿದರೆ ಕೇವಲ ಐದು ದಂಡ ಪ್ರಕರಣಗಳು ಮಾತ್ರ ದಾಖಲಾಗಿರುವುದು ಆಯೋಗದ ಮೃದು ಧೋರಣೆಯನ್ನು ಎತ್ತಿ ತೋರಿಸುತ್ತದೆ.

ನೇರ ಪ್ರಸಾರಕ್ಕೆ ಹೆಚ್ಚಿದ ಒತ್ತಾಯ
“ಸರ್ಕಾರಿ ಇಲಾಖೆಗಳ ಪಾರದರ್ಶಕತೆಯನ್ನು ಪ್ರಶ್ನಿಸುವ ಮತ್ತು ತಿದ್ದುವ ಉನ್ನತ ಸಂಸ್ಥೆಯೇ ತನ್ನ ಪ್ರಕ್ರಿಯೆಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ವಿಪರ್ಯಾಸ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ಮಾದರಿಯಲ್ಲಿ ಮಾಹಿತಿ ಆಯೋಗದ ವಿಚಾರಣೆಗಳನ್ನೂ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಬೇಕು” ಎಂದು ಮಾಹಿತಿ ಹಕ್ಕು ಹೋರಾಟಗಾರರು ತೀವ್ರವಾಗಿ ಒತ್ತಾಯಿಸಿದ್ದಾರೆ.
ಆಯುಕ್ತರ ಅವಧಿಯಲ್ಲಿ ಬದಲಾದ ವಿಚಾರಣಾ ಪದ್ಧತಿ?
ಮಾಹಿತಿ ಹಕ್ಕು ಹೋರಾಟಗಾರರ ವಲಯದಲ್ಲಿ, ಹಾಲಿ ಮಾಹಿತಿ ಆಯುಕ್ತರಾದ ನಾರಾಯಣ ಚನ್ನಾಳ ಅವರ ಅಧಿಕಾರಾವಧಿಯಲ್ಲಿ ವಿಚಾರಣೆಗಳ ನಿರ್ವಹಣಾ ವಿಧಾನದಲ್ಲಿ ಇಂತಹ ದಿಢೀರ್ ಬದಲಾವಣೆ ಕಂಡುಬಂದಿದೆ ಎಂಬ ಚರ್ಚೆಗಳು ತೀವ್ರವಾಗಿವೆ. ಹಿಂದೆ ಸಾರ್ವಜನಿಕರಿಗೆ ಮತ್ತು ಕಾಯುತ್ತಿರುವ ಎಲ್ಲ ಕಕ್ಷಿದಾರರಿಗೆ ಮುಕ್ತವಾಗಿದ್ದ ವಿಚಾರಣಾ ಸಭಾಂಗಣದಲ್ಲಿ, ಈಗ ಒಂದು ಪ್ರಕರಣ ಮುಗಿದ ನಂತರವೇ ಮತ್ತೊಂದು ಪ್ರಕರಣದವರನ್ನು ಕರೆಯುವ ನಿಯಮ ಮಾಡಿಕೊಳ್ಳಲಾಗಿದೆ. ಸ್ಥಳಾವಕಾಶದ ಕೊರತೆ ಅಥವಾ ಜನಸಂದಣಿ ನಿಯಂತ್ರಣದ ನೆಪವೊಡ್ಡಲಾಗುತ್ತಿದ್ದರೂ, ಈ ಕುರಿತು ಆಯೋಗದ ಕಡೆಯಿಂದ ಯಾವುದೇ ಅಧಿಕೃತ ಲಿಖಿತ ಆದೇಶ ಅಥವಾ ಮಾರ್ಗಸೂಚಿ ಹೊರಬಿದ್ದಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

