ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
‘ಸುಖದ ಕಡಲಲಿ ಹೊರಟರೆ ಕಷ್ಟದಲೆಗಳು ಎದುರಾಗುವುದೆ? ನೋವಿನ ಮಳೆಯಲಿ ನೆನೆದು ಹೋದರೆ ನಾಳಿನ ಹಗಲು ಮೂಡುವುದೇ? ಇವು ಕವಿ ಕೆಎಸ್‌ಎನ್‌ರವರ ಕವಿತೆಯ ಸುಂದರ ಸಾಲುಗಳು ಬದುಕಿನ ಸತ್ಯವನ್ನು ಅತ್ಯಂತ ಮಾರ್ಮಿಕವಾಗಿ ಉಲ್ಲೇಖಿಸಿವೆ. ಬದುಕು ನಿತ್ಯವೂ ನಮಗೆ ಹೊಸ ಹೊಸ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ಅಷ್ಟೆ ಅಲ್ಲ ಅದು ನಾವು ಕಲಿಯುವವರೆಗೂ ಬಿಡದೇ ಇರುವ ಗುರು. ಕಷ್ಟಗಳೇ ಹೆಚ್ಚು ಕಲಿಸುತ್ತೇವೆ ಎಂಬುದು ಅಚ್ಚರಿಯೆನಿಸಿದರೂ ನಂಬಲೇಬೇಕು. ಕಷ್ಟಗಳಿಲ್ಲದೇ ಸುಖದ ಸವಿ ತಿಳಿಯಲು ಸಾಧ್ಯವಿಲ್ಲ. ಇದನ್ನೇ ಸಮಾಜ ಸೇವಕಿ ಸುಧಾ ಮೂರ್ತಿ. ‘ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಆದರೆ ಆ ಕಷ್ಟಗಳನ್ನು ನಾವು ಹೇಗೆ ಎದುರಿಸುತ್ತೇವೆ ಮತ್ತು ಅದರಿಂದ ಏನು ಕಲಿಯುತ್ತೇವೆ ಎಂಬುದು ಮುಖ್ಯ.’ ಎಂದಿದ್ದಾರೆ
ಹೂ ನಗೆ
ಇವತ್ತೇನೋ ಹೀಗಾಯ್ತು. ನಾಳೆ ಆದರೂ ಚೆನ್ನಾಗಿರುತ್ತದೆ ಅಂದರೆ ಮತ್ತೆ ಯಾವುದಾದರೊಂದು ಸಮಸ್ಯೆ ಒಕ್ಕರಿಸಿಕೊಂಡೇ ಬಿಡುತ್ತದೆ. ದಿನಾಲೂ ತೊಂದರೆ ತಾಪತ್ರಯಗಳು ಇದ್ದೇ ಇರುತ್ತವೆ. ಈ ಕಷ್ಟದ ಹಾದಿಯಲ್ಲಿ ಸುಖದ ಬದುಕನ್ನು ಪಡೆಯುವುದು ಅಸಾಧ್ಯವೆಂದು ಅನೇಕರು ನಿತ್ಯ ಅಳುತ್ತಲೇ ಇರುತ್ತಾರೆ. ‘ಕಣ್ಣೀರು ಹಾಕುವುದಕ್ಕಿಂತ, ಧೈರ್ಯದಿಂದ ಎದುರಿಸುವುದೇ ನಿಜವಾದ ಶೌರ್ಯ.’ ಎಂದು ತಿಳಿದವರು ಮಾತ್ರ ಕತ್ತಲೆಯ ದಾರಿಯಲ್ಲೂ ಬೆಳಕನ್ನು ಕಾಣುತ್ತಾರೆ. ತಿಳಿದವರಂತೆ ನಾವೂ ತಿಳಿದವರಾಗಿ ಮುಳ್ಳುಗಳಂತಿರುವ ಕಷ್ಟಗಳನ್ನು ಹೂನಗೆ ಬೀರಿ ಎದುರಿಸುವುದು ಹೇಗೆ ತಿಳಿಯೋಣ ಬನ್ನಿ.

ಮೆಟ್ಟಿಲು
ನಾವು ತಿಳಿದಂತೆ ಕಷ್ಟಗಳು ನಮ್ಮನ್ನು ಪಾತಾಳಕ್ಕೆ ಇಳಿಸಲು ಬರುವುದಿಲ್ಲ. ನಮ್ಮ ಪ್ರತಿಭೆಯನ್ನು ಕುಗ್ಗಿಸಲೂ ಬರುವುದಿಲ್ಲ. ಬದಲಿಗೆ ನಮ್ಮಲ್ಲಿ ಅಡಗಿರುವ ಅಗಾಧ ಶಕ್ತಿಯನ್ನು ಹೊರಗೆಳೆಯಲು ಬರುತ್ತವೆ ಎಂಬುದನ್ನು ತಿಳಿಯಬೇಕು. ಶಾಂತ ಸಮುದ್ರ ಉತ್ತಮ ನಾವಿಕನಾಗಬೇಕು ಎನ್ನುವವನಿಗೆ ತರಬೇತಿ ನೀಡಲಾರದು. ಅಲೆಗಳು ಅಬ್ಬರವಿದ್ದಾಗ ಮಾತ್ರ ನಾವಿಕ ತನ್ನ ನೈಪುಣ್ಯತೆಯನ್ನು ಒರಗೆ ಹಚ್ಚಬಲ್ಲ. ಹಾಗೆಯೇ ಸುಖದ ಸಂದರ್ಭದಲ್ಲಿ ನಮ್ಮೊಳಗಿರುವ ಬುದ್ಧಿವಂತಿಕೆ, ಜಾಣತನ ಹೊರಗೆ ಬಾರವು. ಆದರೆ ಸಂಕಷ್ಟ ಸಮಯವು ನಮ್ಮಲ್ಲಿರುವ ಸಹನೆಯನ್ನು ಜಾಣ್ಮೆಯನ್ನು ಎತ್ತಿ ತೋರಿಸಲು ನೆರವಿಗೆ ಬರುತ್ತದೆ. ಹೀಗಾಗಿಯೇ ಕಷ್ಟ ಬದುಕಿನ ನಿಜವಾದ ಪಾಠಶಾಲೆ ಆಗುತ್ತದೆ. ಕಷ್ಟದ ಪಾಠಶಾಲೆಯಲ್ಲಿ ಅತ್ಯಮೂಲ್ಯ ಪಾಠಗಳನ್ನು ಶ್ರದ್ಧೆಯಿಂದ ಕಲಿತಷ್ಟು ಬದುಕು ಸರಳವಾಗುತ್ತದೆ. ಕಷ್ಟಗಳನ್ನು ಶಾಪವೆಂದು ಭಾವಿಸದೆ ಬದುಕನ್ನು ಉನ್ನತಿಗೇರಿಸುವ ಮೆಟ್ಟಿಲುಗಳೆಂದು ತಿಳಿಯಬೇಕು.
ಆತ್ಮವಿಶ್ವಾಸ
ರಾಷ್ಟ್ರಕವಿ ಜಿಎಸ್‌ಎಸ್ ತಮ್ಮ ಕವಿತೆಯ ಸಾಲುಗಳಲ್ಲಿ ಹೀಗೆ ಹೇಳಿದ್ದಾರೆ. ‘ಎಲ್ಲಾ ಕಳೆಯಲಿ ಎಲ್ಲಾ ಅಳಿಯಲಿ, ಹರಡಲಿ ಕತ್ತಲೆ ಜಗದ ತುಂಬ; ನನ್ನೀ ಎದೆಯೊಳಗಿನ ಪ್ರೀತಿಯ ದೀಪವ ನಂದಿಸಲಾರದು ಯಾವುದೇ ಬಿರುಗಾಳಿ.’ ಧುತ್ತೆಂದು ಕಷ್ಟಗಳು ಎದುರಾದಾಗ ಭಯಗೊಳ್ಳದೆ ಭಯವನ್ನು ಮೆಟ್ಟಿ ನಿಲ್ಲಬೇಕೆಂದು ಈ ಸಾಲುಗಳು ಸಾರುತ್ತಿವೆ. ಹಲವು ಸಲ ನಾವೇ ತಂದುಕೊಂಡ ಕಷ್ಟಗಳು ಆಗಿರುತ್ತವೆ. ಕಷ್ಟಗಳು ಯಾವ ರೀತಿಯಲ್ಲಿದ್ದರೂ ನಮಗೆ ಭಯ ಬೀಳಿಸುತ್ತವೆ. ಅಂಥ ಸಮಯದಲ್ಲಿ ಆತ್ಮವಿಶ್ವಾಸವೇ ನಮಗಿರುವ ದೊಡ್ಡ ಆಯುಧ. ನಮ್ಮ ಕಷ್ಟಗಳಿಗೆ ಇತರರನ್ನು ಹೊರೆಯಾಗಿಸಲು ಪ್ರಯತ್ನಿಸಬಾರದು. ಅದನ್ನು ಮೆಟ್ಟಿ ನಿಲ್ಲುವ ಹೊಣೆ ನಮ್ಮದೇ ಎಂದು ತಿಳಿಯಬೇಕು. ಸ್ವಂತ ಪ್ರಯತ್ನದಿಂದ ಅದನ್ನು ಮೂಲೆಗುಂಪು ಮಾಡಬೇಕು. ಆತ್ಮವಿಶ್ವಾಸವು ನಮಗೆ ರಕ್ಷಣಾ ಕವಚವಾಗಿ ಕೆಲಸ ಮಾಡಬೇಕು. ಆದ್ದರಿಂದ ಕಷ್ಟದ ಹಾದಿಯಲ್ಲಿರುವಾಗ ಭಯದ ಬೆನ್ನೆಲಬು ಮುರಿಯಬೇಕು. ವಿಶ್ವಾಸದಿಂದ ಮುನ್ನುಗ್ಗಬೇಕು.

ಮನೋಧೈರ್ಯ
ಬದುಕಿನ ಹಾದಿಯಲ್ಲಿ ಸಾಗುವಾಗ ಎದುರಾಗುವ ಕಾಲೆಳುವ ಎದುರಾಳಿಗಳೇ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತವೆ ಎಂಬುದನ್ನು ನೆನಪಿಡಬೇಕು. ಇದಕ್ಕೆ ಪೂರಕವಾಗಿ ಉದ್ಯಮಿ ಹೆನ್ರಿ ಫೋರ್ಡ್ ಅವರ ಉಲ್ಲೇಖವೊಂದು ಹೀಗಿದೆ: ‘ ಎಲ್ಲವೂ ನಿಮಗೆ ವಿರುದ್ಧವಾಗಿ ನಡೆಯುತ್ತಿರುವಂತೆ ಅನಿಸಿದಾಗ ನೆನಪಿಡಿ, ವಿಮಾನವು ಗಾಳಿಯ ದಿಕ್ಕಿಗೆ ಎದುರಾಗಿಯೇ ಟೇಕ್-ಆಫ್ ಆಗುತ್ತದೆ, ಗಾಳಿಯ ಹೊತೆಗಲ್ಲ.’ ಬದುಕು ಬದಲಾಗುವುದು ನಮ್ಮ ಆಲೋಚನೆಗಳಿಂದ ಹೊರತು ಪರಿಸ್ಥಿತಿಯಿಂದಲ್ಲ.. ಕಷ್ಟದ ಕಡೆ ನೋಡಿ ಅಂಜಿದರೆ ಕಡ್ಡಿಯಂತಿದ್ದ ಕಷ್ಟ ಗುಡ್ಡದಂತೆ ಕಾಣಿಸುತ್ತದೆ. ಎಷ್ಟೇ ಕಠಿಣ ಸಮಸ್ಯೆ ಎದುರಾದರೂ ಅದನ್ನು ನೋಡುವ ನಮ್ಮ ದೃಷ್ಟಿಕೋನವು ಧನಾತ್ಮಕವಾಗಿದ್ದರೆ ಅದಕ್ಕೆ ಅರ್ಧ ಪರಿಹಾರ ಸಿಕ್ಕಂತೆಯೇ ಸರಿ. ಇದರರ್ಥ ಇಷ್ಟೆ ಧೈರ್ಯ ಕಳೆದುಕೊಂಡರೆ ಕಷ್ಟ ನಮ್ಮ ಬೆನ್ನಟ್ಟುವುದು. ಅದೇ ಧೈರ್ಯದಿಂದ ಎದುರಿಸಿದರೆ ಬಾಲ ಮುದುರಿಕೊಂಡು ಬೀಳುವುದು. ಹೀಗಾಗಿ ಕಷ್ಟದ ಸಮಯದಲ್ಲಿ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವುದು ಮೊದಲ ಆಧ್ಯತೆಯಾಗಬೇಕು ಮನೋಧೈರ್ಯವೊಂದು ಜತೆಗಿದ್ದರೆ ಬೆಟ್ಟದಂತೆ ಕಾಣುವ ಕಷ್ಟ ಹಿಮದಂತೆ ಕರಗುವುದು..
ಪುಟ್ಟ ಹೆಜ್ಜೆ
ಕಷ್ಟ ಹೇಳಿ ಕೇಳಿ ಬರದು. ಅದು ಅಚಾನಾಕ್ಕಾಗಿ ಮುಂದೆ ಬಂದು ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಮುಂದಿನ ದಿನಗಳ ಬಗ್ಗೆ ಚಿಂತಿಸುತ್ತ ಗಾಬರಿಯಿಂದ ಅಯ್ಯೋ! ನನ್ನ ಜೀವನವೇ ಮುಗಿದು ಹೋಯಿತೆಂದು ರೋಧಿಸಬಾರದು. ಪ್ರಸಿದ್ಧ ಬಾಕ್ಸರ್ ಮೊಹಮ್ಮದ ಅಲಿ ಅವರ ಮಾತಿನಂತೆ; ‘ದಿನಗಳನ್ನು ಎಣಿಸಬೇಡಿ, ದಿನಗಳು ಹೆಮ್ಮೆ ಪಡುವಂತೆ ಮಾಡಿ.’ ಇದನ್ನು ಹೇಗೆ ಪರಿಹರಿಸಬೇಕೆಂದು ಯೋಚಿಸುವುದರ ಜೊತೆಗೆ ಯೋಜಿಸಬೇಕು. ಕಷ್ಟವನ್ನು ಮಣೆ ಹಾಕಿ ಕೂರಿಸದೇ ಪರಿಹಾರವನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಬೇಕು ಯೋಜನಾಬದ್ಧ ಪುಟ್ಟ ಪುಟ್ಟ ಹೆಜ್ಜೆಗಳು ದಿನಗಳದಂತೆ ಪರಿಹಾರದ ದಾರಿಯನ್ನು ತೋರಬಲ್ಲವು. ದಿನಕ್ಕಿಷ್ಟು ಅಂತ ಹೆಜ್ಜೆಗಳನ್ನಿಡುತ್ತ ಕಷ್ಟವನ್ನು ಬಗ್ಗು ಬಡಿಯಬೇಕು.
ಸಹನೆ
ಮಹಾನ್ ನಾಯಕ ನೆಲ್ಸನ್ ಮಂಡೇಲಾ ಅವರು ಹೇಳಿದ ಹಾಗೆ, ‘ನಾನು ಎಂದಿಗೂ ಸೋಲುವುದಿಲ್ಲ. ಒಂದೋ ನಾನು ಗೆಲ್ಲುತ್ತೇನೆ, ಇಲ್ಲವೆ ಕಲಿಯುತ್ತೇನೆ.’ ಸಂಕಷ್ಟಗಳನ್ನು ಆತುರಾತುರದಲ್ಲಿ ಪರಿಹರಿಸಲು ಹೋಗಿ ಸೋಲಿನ ಮನೆಯಲ್ಲಿ ಶಾಶ್ವತವಾಗಿ ಇದ್ದು ಬಿಡಬಾರದು. ಈಗಿನ ಡಿಜಿಟಲ್ ದುನಿಯಾದಲ್ಲಿ ನಮಗೆ ಎಲ್ಲವೂ ಇನಸ್ಟಂಟ್ ಆಗಿ ಸಿಗುತ್ತದೆ. ಆದ್ದರಿಂದ ನಾವು ನೋಡನೋಡುತ್ತಲೇ ಕಷ್ಟ ಕರಗಿ ಸುಖವಾಗಬೇಕೆಂದು ಅವಸರಿಸುತ್ತೇವೆ. ಆದರೆ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿನಂತೆ ಆತುರತೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಅವಸರದ ಹಾದಿ ಬಿಟ್ಟು ಸಹನೆಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕಲ್ಲು ಉಳಿಯ ಪೆಟ್ಟು ಸಹಿಸಿದಾಗಲೇ ಪೂಜಿಸಲ್ಪಡುವ ಮೂರ್ತಿಯಾಗಲು ಸಾಧ್ಯ. ಕಲ್ಲು ಕೆಲ ಕಾಲ ಕಷ್ಟವನ್ನು ಸಹಿಸಿದರೆ ಮಾತ್ರ ಸುಂದರ ಶಿಲೆಯಾಗಿ ಅರಳಲು ಸಾಧ್ಯ. ಅಂತೆಯೇ ಕೆಲ ಸಮಯದ ಕಷ್ಟವೆಂದು ತಿಳಿದು ತಾಳ್ಮೆಯಿಂದ ನಿರ್ವಹಿಸಬೇಕು. ಎಂಥ ಘೋರ ಕತ್ತಲಾದರೂ ಇರುಳಿನಲ್ಲಿ ಮಾತ್ರ ಅದರ ಪಾತ್ರ. ಅದರ ಸಮಯ ಮುಗಿಯುತ್ತಿದ್ದಂತೆ ಮುಂಜಾನೆಯ ನೇಸರನ ಬೆಳಕಿಗೆ ದಾರಿ ಮಾಡಿಕೊಡಲೇಬೇಕು. ಸಹನೆಯೊಂದಿದ್ದರೆ ಸಕಲ ವಿಜಯವೂ ನಮ್ಮದೇ. ಅಂತೆಯೇ ಕಷ್ಟಗಳು ನಮ್ಮನ್ನು ಬದುಕಿನ ಸವಾಲುಗಳಿಗೆ ಹದಗೊಳಿಸುತ್ತವೆ ಸುಖಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದನ್ನು ಮರೆಯುವಂತಿಲ್ಲ.
ನಮ್ಮೊಳಗೇ ಇದೆ
ಕಸ್ತೂರಿ ಮೃಗವು ಸುವಾಸನೆ ಎಲ್ಲಿಂದ ಬರುತ್ತಿದೆ ಎಂದು ಇಡೀ ಕಾಡನ್ನು ಹುಡುಕುತ್ತದೆ. ವಾಸ್ತವದಲ್ಲಿ ಸುವಾಸನೆ ಅದರ ನಾಭಿಯಲ್ಲೇ ಇರುತ್ತದೆ. ಹಾಗೆಯೇ ಕಷ್ಟಕ್ಕೆ ಪರಿಹಾರವನ್ನು ಅಲ್ಲಿ ಇಲ್ಲಿ ಹೊರಗೆ ಹುಡುಕುತ್ತ ದೇವರ ಕಾಣಿಕೆಯಾದ ಬದುಕನ್ನು ಹಾಳು ಮಾಡಿ ಬಿಡುತ್ತೇವೆ. ಕಷ್ಟಗಳನ್ನು ಎದುರಿಸುವ ಶಕ್ತಿ ನಮ್ಮೊಳಗೇ ಇದೆ ಎಂಬುದನ್ನು ತಿಳಿಯಬೇಕು. ಸಹನೆಯ ಹಾದಿಯಲ್ಲಿ ಭರವಸೆಯ ಹಣತೆ ಹಚ್ಚಿ ಧೈರ್ಯದಿಂದ ಮುನ್ನಗ್ಗಬೇಕು. ಆಗ ಕಷ್ಟಗಳೆಂಬ ಮುಳ್ಳುಗಳ ಹಾದಿಯಲ್ಲೂ ಮುಗುಳ್ನಗುತ್ತ ಪಯಣಿಸಬಹುದು. ಇತಿಹಾಸದ ಪುಟದಲ್ಲಿ ಜಾಗ ಪಡೆದು ಹೊಸದೊಂದು ಇತಿಹಾಸ ಸೃಷ್ಟಿಸಬಹುದು.


