ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಂಬಾಕು ವಿರೋಧಿ ದಿನದ ಅಂಗವಾಗಿ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಘಟಕ-I ಮತ್ತು ಘಟಕ-II ನೇತೃತ್ವದಲ್ಲಿ ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಮತ್ತು ತಂಬಾಕು ಮುಕ್ತ ಜೀವನಶೈಲಿಯನ್ನು ಪ್ರೋತ್ಸಾಹಿಸಲು ವಿಶೇಷ ಜಾಗೃತಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪ್ರೊ.ಮಿಲನ್ ರಾಥೋಡ್ ಹಾಗೂ ಡಾ.ತರನ್ನುಮ್ ಜಬೀನ್ ಖಾನ್ ಮಾತನಾಡಿ, ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದ ಜೀವಕ್ಕೆ ಅಪಾಯವೇ ಹೆಚ್ಚು. ತಂಬಾಕಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದರಿಂದ ನಾವೆಲ್ಲ ತಂಬಾಕು ಸೇವನೆ ಮಾಡಬಾರದು. ಪ್ರತಿಯೊಬ್ಬರ ಉತ್ತಮ ಆರೋಗ್ಯ ಸ್ವಾಸ್ತ್ಯ ಸಮಾಜದ ಹೆಗ್ಗುರುತು ಎಂದರು.
ತಂಬಾಕಿನ ಅಂಶ ಹೃದಯ ಸಂಬಂಧಿ ರೋಗಕ್ಕೂ ಕಾರಣವಾಗುತ್ತದೆ. ಆ ಹಿನ್ನೆಲೆ ವಿದ್ಯಾರ್ಥಿಗಳು ತಂಬಾಕಿನ ಅಪಾಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಬೇಕು ಎಂದು ಹೇಳಿದರು.

